ದೇಶ

ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕಾಂಗ್ರೆಸ್ ನಿಂದ ಎಫ್ಐಆರ್ ದಾಖಲು

Sumana Upadhyaya

ನವದೆಹಲಿ:ನಾನು ತನಿಖೆ ಎದುರಿಸಲು ಸಿದ್ದ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರತಿಕ್ರಿಯಿಸಿದ್ದಾರೆ.
ಆಡಿಯೊ ಕ್ಲಿಪ್ ನಲ್ಲಿರುವುದು ನನ್ನ ಸ್ವರವಲ್ಲ, ಹೀಗಾಗಿ ನನ್ನದೇನೂ ತಪ್ಪಿಲ್ಲ, ನಾವು ಯಾವುದೇ ರೀತಿಯ ತನಿಖೆಗೆ ಸಿದ್ಧನಿದ್ದೇನೆ ಎಂದಿದ್ದಾರೆ.

ರಾಜಸ್ತಾನದಲ್ಲಿ ಅಶೋಕ್ ಗೆಹ್ಲೊಟ್ ನೇತೃತ್ವದ ಸರ್ಕಾರ ಉರುಳಿಸಲು ಕಾಂಗ್ರೆಸ್ ನ ಬಂಡಾಯ ಶಾಸಕರೊಂದಿಗೆ ಸೇರಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪಿತೂರಿ ನಡೆಸಿದ್ದಾರೆ, ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷವೊಡ್ಡಿದ್ದಾರೆ ಎಂದು ಕಾಂಗ್ರೆಸ್ ಆಪಾದಿಸಿ ಸಚಿವರ ವಿರುದ್ಧ ಇಂದು ಎರಡು ಎಫ್ಐಆರ್ ದಾಖಲಿಸಿದೆ.

ಈ ಸಂಬಂಧ ಸಚಿವ ಗಜೇಂದ್ರ ಸಿಂಗ್ ಮತ್ತು ಕಾಂಗ್ರೆಸ್ ನ ಬಂಡಾಯ ಶಾಸಕ ಬನ್ವರ್ ಲಾಲ್ ಶರ್ಮ ಅವರು ಮಾತನಾಡಿದ್ದು ಎನ್ನುವ ಎರಡು ಆಡಿಯೊ ಕ್ಲಿಪ್ ಗಳನ್ನು ಸಹ ಬಿಡುಗಡೆ ಮಾಡಿದೆ. ಇದು ಮಾಧ್ಯಮಗಳಲ್ಲಿ ಸಹ ನಿನ್ನೆ ಸುದ್ದಿಯಾಗಿತ್ತು.

ಸುರ್ಜೆವಾಲಾ ಅವರು ಮಾಧ್ಯಮ ಗೋಷ್ಠಿಯಲ್ಲಿ ಶೇಖಾವತ್ ಹೆಸರನ್ನು ಪ್ರಸ್ತಾಪಿಸಿದ್ದರೂ ಕೂಡ ಪಕ್ಷದ ಸಚೇತಕ ಮಹೇಶ್ ಜೋಷಿ ದಾಖಲಿಸಿರುವ ಎಫ್ಐಆರ್ ನಲ್ಲಿ ಅವರು ಹೆಸರು ಇಲ್ಲ ಎಂದು ತಿಳಿದುಬಂದಿದೆ. ದೂರಿನಲ್ಲಿ ಗಜೇಂದ್ರ ಸಿಂಗ್ ಎಂದು ಹೆಸರು ಇದೆಯಷ್ಟೆ ಹೊರತು ಅವರು ಕೇಂದ್ರ ಸಚಿವರು ಎಂದು ದಾಖಲಿಸಿಲ್ಲ.

ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ ಎಡಿಜಿ ಅಶೋಕ್ ರಾಥೋಡ್, ಶಾಸಕರನ್ನು ಕುದುರೆ ವ್ಯಾಪಾಕ ಮೂಲಕ ಖರೀದಿಸಲು ಪಿತೂರಿ ನಡೆಸಲಾಗಿದೆ ಎಂದು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಆಡಿಯೊ ಕ್ಲಿಪ್ ಗೆ ಸಂಬಂಧಿಸಿದಂತೆ ಎರಡು ಎಫ್ಐಆರ್ ನ್ನು ಕಾಂಗ್ರೆಸ್ ದಾಖಲಿಸಿದೆ ಎಂದಿದ್ದಾರೆ.

ರಾಜಸ್ತಾನದ ಜೋಧ್ ಪುರ ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಗಜೇಂದ್ರ ಸಿಂಗ್ ಶೇಖಾವತ್ ಪ್ರಸ್ತುತ ಮೋದಿ ಸರ್ಕಾರದಲ್ಲಿ ಜಲಶಕ್ತಿ ಇಲಾಖೆಯ ಸಂಪುಟ ಸಚಿವರಾಗಿದ್ದಾರೆ.

SCROLL FOR NEXT