ಜೈಪುರ: ರಾಜಸ್ಥಾನದಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೈ ಶಾಸಕರು ಬಂಡಾಯವೆದ್ದಿದ್ದಾರೆ. ಇನ್ನು ರಾಜ್ಯದಲ್ಲಿ ಕುದುರೆ ವ್ಯಾಪಾರ ಕುರಿತು ಕಾಂಗ್ರೆಸ್ ಆರೋಪಿಸಿದ್ದು ಇದಕ್ಕೆ ಪ್ರತಿಯಾಗಿ ಬಿಜೆಪಿ ಸಿಬಿಐ ತನಿಖೆಗೆ ಆಗ್ರಹಿಸುತ್ತಿದೆ.
ರಾಜಸ್ಥಾನದಲ್ಲಿ ಸಿಬಿಐ ತನಿಖೆ ಆರಂಭಿಸಲು ರಾಜ್ಯ ಸರ್ಕಾರದಿಂದ ನೀಡಲಾಗಿದ್ದ ಸಾರ್ವತ್ರಿಕ ಪೂರ್ವಾನುಮತಿ ನಿಯಮವನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರ ರದ್ದುಪಡಿಸಿದೆ.
ಇನ್ನು ಮುಂದೆ ಸಿಬಿಐ ಯಾವುದೇ ಒಂದು ನಿರ್ದಿಷ್ಟ ಪ್ರಕರಣದ ತನಿಖೆ ನಡೆಸಬೇಕಾದರೆ ರಾಜಸ್ಥಾನ ಸರ್ಕಾರ ಅನುಮತಿ ಪಡೆಯಬೇಕಿದೆ.
1946ರ ದೆಹಲಿ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಯಾವುದೇ ಪ್ರಕರಣವನ್ನು ತನಿಖೆ ಮಾಡುವ ಮುನ್ನ ಇಂತಹ ಅನುಮತಿ ಅಗತ್ಯ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ರಾಜ್ಯ ಸರ್ಕಾರ ಎಸ್ಒಜಿ ಮತ್ತು ಎಸಿಬಿಯನ್ನು ದುರುಪಯೋಗಪಡಿಸಿಕೊಂಡ ರೀತಿ ಮತ್ತು ಸಿಬಿಐ ಕ್ರಮಕ್ಕೆ ಹೆದರುತ್ತಿದ್ದು ಈ ರೀತಿ ಆದೇಶ ಹೊರಡಿಸಿದೆ. ಇದರಲ್ಲಿ ಏನೋ ಅಡಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.