ದೇಶ

ಘಾಜಿಯಾಬಾದ್ ಪತ್ರಕರ್ತನ ಸಾವು ಪ್ರಕರಣ: ಉತ್ತರ ಪ್ರದೇಶವನ್ನು ಗೂಂಡಾ ರಾಜ್ಯ ಎಂದ ಕಾಂಗ್ರೆಸ್ ನಾಯಕರು

Manjula VN

ನವದೆಹಲಿ: ಘಾಜಿಯಾಬಾದ್ ಮೂಲದ ಪತ್ರಕರ್ತ ವಿಕ್ರಮ್ ಜೋಶಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಡಳಿತಾರೂಢ ಉತ್ತರಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರವಾಗಿ ಕಿಡಿಕಾರಿದ್ದು, ಉತ್ತರಪ್ರದೇಶ ಸರ್ಕಾರವನ್ನು ಗೂಂಡಾ ರಾಜ್ಯವೆಂದು ಕಿಡಿಕಾರಿದ್ದಾರೆ. 

ಪತ್ರಕರ್ತನ ಸಾವು ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು,  ಪತ್ರಕರ್ತನ ಕೊಲೆ ಮತ್ತು ಸಂಬಂಧಿಯ ಮೇಲಿನ ಹಲ್ಲೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಅಲ್ಲದೆ ಯೋಗಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು ರಾಮರಾಜ್ಯದ ಮಾತುಕೊಟ್ಟಿದ್ದ ಬಿಜೆಪಿ ಸರ್ಕಾರ ಗೂಂಡಾ ರಾಜ್ಯವನ್ನು ನಿರ್ಮಾಣ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇದೇವಿಚಾರವಾಗಿ ಟ್ವೀಟ್ ಮಾಡಿರುವ ರಂದೀಪ್ ಸುರ್ಜೇವಾಲಾ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭರವಸೆ ನೀಡಿದ್ದ ಅದೇ ರಾಮ ರಾಜ್ಯವೇ? ಇದು ಸಂಪೂರ್ಣ 'ಗೂಂಡರಾಜ್'. ಯುಪಿಯಲ್ಲಿ ಪತ್ರಕರ್ತರಾಗಲೀ, ಕಾನೂನನ್ನು ರಕ್ಷಿಸುವವರಾಗಲೀ ಸುರಕ್ಷಿತವಲ್ಲ, ಇವರಿಂದ ಸಾಮಾನ್ಯ ಜನರು ನ್ಯಾಯವನ್ನು ಹೇಗೆ ನಿರೀಕ್ಷಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ. 

ಗಾಜಿಯಾಬಾದ್ ಪ್ರದೇಶದಲ್ಲಿ ಜಂಗಲ್ ರಾಜ್ ಸೃಷ್ಟಿಯಾಗದಿರುವುದು ಆಘಾತಕಾರಿ, ಈಗಾಗಲೇ ಎಫ್‌ಐಆರ್‌ನಲ್ಲಿ ದೂರುದಾರನಾಗಿದ್ದ ಪತ್ರಕರ್ತ ಜೋಶಿ ತನ್ನ ಹೆಣ್ಣುಮಗುವಿನೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಗುಂಡು ಹಾರಿಸಲಾಗಿದೆ.  ತಲೆ ಬುರುಡುಗೆ ಅದೃಷ್ಟವಶಾತ್ ಮಗುವಿಗೆ ಏನೂ ಆಗಿಲ್ಲ. ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಭಯವೇಇಲ್ಲದಂತಾಗಿದೆ ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಕಿಡಿಕಾರಿದ್ದಾರೆ.

ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಅವರು, ಘಾಜಿಯಾಬಾದ್ ಘಟನೆ ಇಡೀ ರಾಜ್ಯವನ್ನು ಆತಂಕಗೊಳಿಸಿದೆ. ಉತ್ತರ ಪ್ರದೇಶದಲ್ಲಿ ಯಾರೂ ಸುರಕ್ಷಿತವಾಗಿಲ್ಲ. ಅಪರಾಧಿಗಳು ಯೋಗಿ ಸರ್ಕಾರದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಈ ಹಿಂದೆಂದಿಗಿಂತಲೂ ಅಪರಾಧಿಗಳು ಹೆಚ್ಚೆಚ್ಚು ಸಕ್ರಿಯರಾಗಿದ್ದಾರೆ. ಅಪರಾಧಿಗಳ ವಿಚಾರವಾಗಿ ಸರ್ಕಾರವೇಕೆ ಮೌನವಾಗಿದೆ ಎಂದು ತಿಳಿಯುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಪತ್ರಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಠಾಣಾ ವ್ಯಾಪ್ತಿಯ ಠಾಣಾ ಉಸ್ತುವಾರಿ ಆಧಿಕಾರಿಯನ್ನು ಅಮಾನತು ಮಾಡಲಾಗಿದೆ. ಅಲ್ಲದೆ ತನಿಖೆಗೆ ಆದೇಶಿಸಿದ್ದು, ಪ್ರಕರಣ ಸಂಬಂಧ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಬಂಧನಕ್ಕಾಗಿ ಬಲೆ ಬೀಸಲಾಗಿದೆ.

SCROLL FOR NEXT