ದೇಶ

ತಮಿಳುನಾಡು ರಾಜಭವನ ಸೀಲ್ ಡೌನ್, 84 ಸಿಬ್ಬಂದಿಗೆ ಕೊರೋನಾ ಪಾಸಿಟಿವ್

Lingaraj Badiger

ಚೆನ್ನೈ: ಭದ್ರತಾ ಸಿಬ್ಬಂದಿ, ಅಗ್ನಿ ಶಾಮಕ ಸಿಬ್ಬಂದಿ ಸೇರಿದಂತೆ ತಮಿಳುನಾಡು ರಾಜಭವನದಲ್ಲಿ ಕೆಲಸ ಮಾಡುತ್ತಿದ್ದ 84 ಸಿಬ್ಬಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ರಾಜಭವನದ ಕ್ಯಾಂಪಸ್ ಅನ್ನು ಸಾನಿಟೈಸ್ ಮಾಡಲಾಗಿದೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ರಾಜಭವನವನ್ನು ಸೀಲ್ ಡೌನ್ ಮಾಡಲಾಗಿದೆ.

ರಾಜಭವನದ ಕೆಲವು ಸಿಬ್ಬಂದಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿನ 147 ಸಿಬ್ಬಂದಿಯನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 84 ಮಂದಿಯ ವರದಿ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದ ಎಲ್ಲಾ ಸಿಬ್ಬಂದಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ ಎಂದು ರಾಜಭವನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪಾಸಿಟಿವ್ ಬಂದ ಈ ಎಲ್ಲಾ ಸಿಬ್ಬಂದಿಯೂ ರಾಜಭವನ ಮುಖ್ಯ ಗೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಸೋಂಕಿತ ಯಾವ ಸಿಬ್ಬಂದಿಯೂ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರ ಸಂಪರ್ಕಕ್ಕೆ ಬಂದಿಲ್ಲ ಎಂದು ರಾಜಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚಿಗೆ ತಮಿಳುನಾಡು ಸಚಿವಾಲಯದ ಹಲವು ಹಿರಿಯ ಅಧಿಕಾರಿಗಳು ಮತ್ತು ನೌಕರರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯನ್ನು ಪ್ರಮಾಣವನ್ನು ಶೇ. 50 ರಿಂದ ಶೇ.33ಕ್ಕೆ ಇಳಿಸಬೇಕು ಎಂದು ನೌಕರರ ಸಂಘ ಒತ್ತಾಯಿಸಿತ್ತು.

SCROLL FOR NEXT