ದೇಶ

ರಾಜಸ್ಥಾನ ಬಿಕ್ಕಟ್ಟು: ಬಿಜೆಪಿ ವಿರುದ್ಧ ಶನಿವಾರ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ

Lingaraj Badiger

ಜೈಪುರ: ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಉರುಳಿಸುವ ಬಿಜೆಪಿ ಪಿತೂರಿ ವಿರುದ್ಧ ಕಾಂಗ್ರೆಸ್ ಶನಿವಾರ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದೆ.

ಪ್ರಜಾಪ್ರಭುತ್ವದ ಕಗ್ಗೊಲೆಗೆ ಯತ್ನಿಸುತ್ತಿರುವ ಬಿಜೆಪಿಯ ಪಿತೂರಿ ಖಂಡಿಸಿ ನಾಳೆ ಬೆಳಗ್ಗೆ 11 ಗಂಟೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಜಸ್ಥಾನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ದೊತಸ್ರಾ ಅವರು ಹೇಳಿದ್ದಾರೆ.

ಅಗತ್ಯಬಿದ್ದರೆ ನಮ್ಮ ಕಾರ್ಯಕರ್ತರು ಗ್ರಾಮ ಪಂಚಾಯ್ತಿಗಳಲ್ಲೂ ಪ್ರತಿಭಟನೆ ನಡೆಸಲಿದ್ದಾರೆ ಎಂದು ದೊತಸ್ರಾ ಅವರು ವರದಿಗಾರರಿಗೆ ತಿಳಿಸಿದ್ದಾರೆ.

ದೆಹಲಿಯಲ್ಲಿರುವ ಕಾಣದ ಶಕ್ತಿಗಳು ರಾಜ್ಯ ವಿಧಾನಸಭೆಯ ಅಧಿವೇಶನ ಕರೆಯದಂತೆ ರಾಜ್ಯಪಾಲರ ಮೇಲೆ ಒತ್ತಡ ಹಾಕುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ ಬಿಜೆಪಿ ಶಾಸಕರ ಕುದುರೆ ವ್ಯಾಪಾರ ನಡೆಸುವ ಮೂಲಕ ಕುದುರೆ ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ದೂರಿದ್ದಾರೆ.

ರಾಜ್ಯಪಾಲರು ಕೂಡಲೇ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿ ಅಶೋಕ್ ಗೆಹ್ಲೋಟ್ ಬೆಂಬಲಿತ ಶಾಸಕರು, ರಾಜಭವನದಲ್ಲಿಯೇ ಈಗಾಗಲೇ ಧರಣಿ ಆರಂಭಿಸಿದ್ದಾರೆ. ಈಗ ರಾಜ್ಯಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಮುಂದಾಗಿದೆ.

ಈ ಮಧ್ಯೆ, ಗಾಂಧಿ ಮಾರ್ಗ ಅನುಸರಿಸುವಂತೆ ರಾಜಭವನದಲ್ಲಿ ಪ್ರತಿಭಟನೆ ನಡೆಸುತ್ತಿರುವ ತಮ್ಮ ಬೆಂಬಲಿತ ಶಾಸಕರು ಸಿಎಂ ಗೆಹ್ಲೋಟ್ ಅವರು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT