ದೇಶ

ಅಯೋಧ್ಯೆ ರಾಮಮಂದಿರ ಭೂಮಿ ಪೂಜೆಗೆ ತಡೆ ಕೋರಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ!

Srinivasamurthy VN

ನವದೆಹಲಿ: ಅಯೋಧ್ಯೆಯಲ್ಲಿ ಆಗಸ್ಟ್‌ 5 ರಂದು ನಡೆಯಲಿರುವ ರಾಮ ಮಂದಿರ ಭೂಮಿ ಪೂಜೆಗೆ ಮತ್ತೊಂದು ವಿಘ್ನ ಎದುರಾಗಿದ್ದು, ಭೂಮಿ ಪೂಜೆ ಕಾರ್ಯಕ್ರಮಕ್ಕೆ ತಡೆ ಕೋರಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಸಾರ್ವಜನಿಕಿ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ.

ಆಗಸ್ಟ್‌ 5 ರಂದು ಭವ್ಯವಾದ ಮಂದಿರ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದೆ. ಈ ಪೂಜೆ ಮೂರು ದಿನಗಳ ಸುದೀರ್ಘ ವೈದಿಕ ಆಚರಣೆಗಳ ಮೂಲಕ ನಡೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ 40 ಕೆಜಿ ಬೆಳ್ಳಿ ಇಟ್ಟಿಗೆಯನ್ನು ಅಡಿಪಾಯಕ್ಕೆ ಅಳವಡಿಸುವ ಮೂಲಕ ದೇಗುಲ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. 

ಇದೇ ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮ ಕೋವಿಡ್-19 ನಿಯಮಾವಳಿಗಳ ಉಲ್ಲಂಘನೆಯಾಗಿದ್ದು ಕೂಡಲೇ ಭೂಮಿ ಪೂಜೆ ಕಾರ್ಯಕ್ರಮಕ್ಕೆ ತಡೆ ನೀಡಬೇಕು ಎಂದು ದೆಹಲಿ ಮೂಲದ ಪತ್ರಕರ್ತರೊಬ್ಬರು ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದಾರೆ.

'ದೇಶದಲ್ಲಿ ಕೊರೊನಾ ವೈರಸ್‌ ತೀವ್ರಗತಿಯಲ್ಲಿ ಹಬ್ಬುತ್ತಿರುವ ನಡುವೆಯೇ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಕೇಂದ್ರ ಸರ್ಕಾರಕದ ಅನ್‌ಲಾಕ್‌ 2.0 ಮಾರ್ಗಸೂಚಿಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಅಂತೆಯೇ ಕೊರೋನಾ ವೈರಸ್‌ ಸಮಯದಲ್ಲಿ ಕಾರ್ಯಕ್ರಮ ನಡೆಯವುದು ಬೇಡ ಎಂದಿರುವ ಅರ್ಜಿದಾರ, ಭೂಮಿ ಪೂಜೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. 

ಈ ಹಿಂದೆ ಬದರಿನಾಥದ ಜ್ಯೋತಿರ್ಮಠದ ಪೀಠಾಧಿಪತಿ ಸ್ವಾಮಿ ಶಂಕರಾಚಾರ್ಯ ಸ್ವರೂಪಾನಾಂದ ಸರಸ್ವತಿ ಶ್ರೀಗಳು ರಾಮ ಮಂದಿರದ ಭೂಮಿ ಪೂಜೆಗೆ ಅಪಸ್ವರ ಎತ್ತಿದ್ದರು.  ಇಂತಹ ಅಶುಭ ಘಳಿಗೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ನೆರವೇರಿಸುವ ಅವಶ್ಯಕತೆಯಾದರೂ ಏನು..? ಸದ್ಯದ ಅಶುಭ ಘಳಿಗೆಯಲ್ಲಿ ಭೂಮಿ ಪೂಜೆ ನೆರವೇರಿಸುವುದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ ಎಂದು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅಪಸ್ವರ ವ್ಯಕ್ತಪಡಿಸಿದ್ದರು. 

SCROLL FOR NEXT