ದೇಶ

ಪೂರ್ವ ಲಡಾಕ್ ನಿಂದ ಸೇನೆ ಹಿಂತೆಗೆತಕ್ಕೆ ಒಪ್ಪಿಗೆ: ಮತ್ತೊಂದು ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆಗೆ ಸಿದ್ದ

Sumana Upadhyaya

ನವದೆಹಲಿ: ಸರಿಸುಮಾರು ಎರಡೂವರೆ ತಿಂಗಳ ಬಳಿಕ ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆ(ಎಲ್ ಎಸಿ)ಯಿಂದ ಸೇನೆಯನ್ನು ಹಿಂತೆಗೆದುಕೊಳ್ಳಲು ಭಾರತ ಮತ್ತು ಚೀನಾ ದೇಶಗಳು ಒಪ್ಪಿಗೆ ಸೂಚಿಸಿವೆ.

ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಮತ್ತು ಗಡಿಯಲ್ಲಿ ಉತ್ತಮ ಬೆಳವಣಿಗೆಗೆ ಯುದ್ಧ, ಸಂಘರ್ಷ ಮಾಡದೆ ಸೇನೆಯನ್ನು ಹಿಂತೆಗೆದುಕೊಳ್ಳುವುದೇ ಪರಿಹಾರ ಎಂಬ ಮಾತಿಗೆ ಎರಡೂ ದೇಶಗಳು ಬದ್ಧವಾದಂತೆ ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲು ಮತ್ತೊಂದು ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ನಡೆಸಲು ಎರಡೂ ದೇಶಗಳು ನಿರ್ಧರಿಸಿವೆ.

ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯತೆಯ 17ನೇ ಕಾರ್ಯತಂತ್ರ(ಡಬ್ಲ್ಯುಎಂಸಿಸಿ) ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಹಿರಿಯ ಕಮಾಂಡರ್ ಮಟ್ಟದ ಮಾತುಕತೆ ನಡೆಯಬಹುದು ಎಂದು ವಿದೇಶಾಂಗ ಸಚಿವಾಲಯ ಹೇಳಿದರೆ ಅದು ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಎಂದು ಸೇನಾ ಮೂಲಗಳು ತಿಳಿಸಿವೆ. ಸಭೆಯ ದಿನಾಂಕ ನಿಗದಿಪಡಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ನಿರತವಾಗಿವೆ.

ಹಿರಿಯ ಕಮಾಂಡರ್ ಗಳ ಮತ್ತೊಂದು ಸುತ್ತಿನ ಸಭೆಯನ್ನು ಶೀಘ್ರದಲ್ಲೇ ನಡೆಸಬಹುದು ಎಂದು ಉಭಯ ಪಕ್ಷಗಳು ಒಪ್ಪಿಕೊಂಡಿವೆ, ಇದರಿಂದಾಗಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ಪುನಃಸ್ಥಾಪನೆಗೆ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

SCROLL FOR NEXT