ದೇಶ

ಕಾರ್ಬೆಟ್ ನಲ್ಲಿ ದೇಶದಲ್ಲೇ ಅತಿ ಹೆಚ್ಚು ಹುಲಿ, ಇತರೆ 3 ರಕ್ಷಿತಾರಣ್ಯಗಳಲ್ಲಿ ಹುಲಿಯೇ ಇಲ್ಲ: ವರದಿ

Lingaraj Badiger

ನವದೆಹಲಿ: ಹುಲಿ ಗಣತಿ ನಡೆಸಿದ ಒಂದು ವರ್ಷದ ನಂತರ ಮಂಗಳವಾರ ವಿವರವಾದ ವರದಿ ಬಿಡುಗಡೆಯಾಗಿದ್ದು, ಉತ್ತರಾಖಂಡದ ಕಾರ್ಬೆಟ್ ಟೈಗರ್ ರಿಸರ್ವ್‌ನಲ್ಲಿ ದೇಶದಲ್ಲಿ ಅತಿ ಹೆಚ್ಚು ಅಂದರೆ 231 ಹುಲಿಗಳಿವೆ ಎಂದು ತಿಳಿಸಲಾಗಿದೆ. ಮಿಜೋರಾಂ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ಮೂರು ಹುಲಿ ರಕ್ಷಿತಾರಣ್ಯಗಳಲ್ಲಿ ಯಾವುದೇ ಹುಲಿ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ವಿಶ್ವ ಹುಲಿ ದಿನದ ಅಂಗವಾಗಿ ಇಂದು 2019ನೇ ಸಾಲಿನ ಸುಮಾರು 600 ಪುಟಗಳ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರು.

ದೇಶಾದಲ್ಲಿ ಒಟ್ಟು 50 ಹುಲಿ ರಕ್ಷಿತಾರಣ್ಯಗಳಿದ್ದು, ಈ ಪೈಕಿ ಮಿಜೋರಾಂನ ದಂಪಾ ಹುಲಿ ರಕ್ಷಿತಾರಣ್ಯ, ಪಶ್ಚಿಮ ಬಂಗಾಳದ ಬುಕ್ಸಾ ಮತ್ತು ಜಾರ್ಖಂಡ್‌ನ ಪಲಮೌ ಹುಲಿ ರಕ್ಷಿತಾರಣ್ಯಗಳಲ್ಲಿ ಯಾವುದೇ ಹುಲಿಗಳು ಇಲ್ಲ ಎಂದು ವರದಿ ತಿಳಿಸಿದೆ.

ಪ್ರಸ್ತುತ, ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ 1,923(ಭಾರತದ ಒಟ್ಟು ಹುಲಿ ಜನಸಂಖ್ಯೆಯ ಶೇಕಡಾ 65) ಹುಲಿಗಳಿವೆ ಎಂದು ವರದಿ ತಿಳಿಸಿದೆ.

2018-19ನೇ ಸಾಲಿನ ಹುಲಿ ಗಣತಿಯ ಪ್ರಕಾರ, ಕಾರ್ಬೆಟ್‌ನಲ್ಲಿ 231 ಹುಲಿಗಳಿವೆ, ನಂತರ ಕರ್ನಾಟಕದ ನಾಗರಹೊಳೆ ಮತ್ತು ಬಂಡೀಪುರ ಹುಲಿ ರಕ್ಷಿತಾರಣ್ಯಗಳಲ್ಲಿ ಕ್ರಮವಾಗಿ 127 ಮತ್ತು 126 ಹುಲಿಗಳಿವೆ.

ಅಸ್ಸಾಂನ ಕಾಜಿರಂಗಾ ಮತ್ತು ಮಧ್ಯಪ್ರದೇಶದ ಬಂದಗಢಾದಲ್ಲಿ ತಲಾ 104 ಹುಲಿಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.

SCROLL FOR NEXT