ದೇಶ

ಕೊರೋನಾ ಸಾವಿನ ಪ್ರಮಾಣ ಕ್ರಮೇಣ ಕುಸಿಯುತ್ತಿದೆ, ದೇಶಾದ್ಯಂತ 9.88 ಲಕ್ಷ ಮಂದಿ ಗುಣಮುಖ: ಕೇಂದ್ರ

Lingaraj Badiger

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಸಾವಿನ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದ್ದು, ಬುಧವಾರ ಶೇಕಡಾ 2.23ಕ್ಕೆ ಇಳಿದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶದಲ್ಲಿ ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು, ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 35,286 ಮಂದಿ ಡಿಸ್ಚಾರ್ಜ್ ಆಗಿದ್ದು, ಇದರೊಂದಿಗೆ ಕೊರೋನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 9.88,029ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತೆಗೆದುಕೊಂಡ ಪರಿಣಾಮಕಾರಿ 'ಟೆಸ್ಟ್, ಟ್ರ್ಯಾಕ್, ಟ್ರೀಟ್ ತಂತ್ರದಿಂದ ಸಾವಿನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಗುಣಮುಖ ಪ್ರಮಾಣವು ಶೇ 64.51ಕ್ಕೆ ಏರಿಕೆ ಆಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಜೂನ್‌ ಮಧ್ಯ ಭಾಗದಲ್ಲಿ ಈ ಪ್ರಮಾಣವು ಶೇ. 53ರಷ್ಟಿತ್ತು.

ದೇಶದಲ್ಲಿ ಕೊರೋನಾ ಸಾವಿನ ಪ್ರಮಾಣ ಜೂನ್ ಮಧ್ಯದಲ್ಲಿ ಶೇ. 3.33ರಷ್ಟು ಇತ್ತು. ಈಗ ಅದು ಶೇ.2.23ಕ್ಕೆ ಇಳಿದಿದೆ. ಜಗತ್ತಿನಲ್ಲಿ ಕೊರೋನಾ ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇರುವ ದೇಶಗಳಲ್ಲಿ ಭಾರತವೂ ಒಂದು ಎಂದು ಸಚಿವಾಲಯ ತಿಳಿಸಿದೆ.

SCROLL FOR NEXT