ದೇಶ

ರಾಜಸ್ಥಾನ ಸಿಎಂ ಗೆಹ್ಲೋಟ್ ಪ್ರಸ್ತಾವನೆ ಒಪ್ಪಿದ ಗವರ್ನರ್, ಆಗಸ್ಟ್ 14ರಿಂದ ಅಧಿವೇಶನ

Lingaraj Badiger

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಅಧಿವೇಶನ ಕರೆಯುವಂತೆ ನಾಲ್ಕನೇ ಬಾರಿ ಕಳುಹಿಸಿದ ಪ್ರಸ್ತಾವನೆಯನ್ನು ರಾಜ್ಯಪಾಲ ಕಲರಾಜ್ ಮಿಶ್ರಾ ಅವರು ಒಪ್ಪಿಕೊಂಡಿದ್ದು, ಆಗಸ್ಟ್ 14ರಿಂದ ರಾಜ್ಯ ವಿಧಾನಸಭೆ ಅಧಿವೇಶನ ಕರೆದಿದ್ದಾರೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ರಾಜಭವನ, 'ರಾಜಸ್ಥಾನ ವಿಧಾನಸಭೆಯ ಐದನೇ ಅಧಿವೇಶನವನ್ನು ಆಗಸ್ಟ್‌ 14 ರಿಂದ ಆರಂಭಿಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ' ಎಂದು ತಿಳಿಸಿದೆ.

ಜುಲೈ 31ರಂದೇ ವಿಶೇಷ ಅಧಿವೇಶನ ಕರೆಯುವಂತೆ ಸಿಎಂ ಗೆಹ್ಲೋಟ್‌ ಅವರು ಸಲ್ಲಿಸಿದ್ದ ಶಿಫಾರಸನ್ನು ಪ್ರಶ್ನಿಸಿದ್ದ ರಾಜ್ಯಪಾಲರು,  ಕೊರೊನಾ ವೈರಸ್‌ ಮಹಾಮಾರಿಯ ಹಿನ್ನೆಲೆಯಲ್ಲಿ 21 ದಿನಗಳ ನೋಟಿಸ್‌ ನೀಡಿದೆ ಅಧಿವೇಶನ ಕರೆಯುವ ಜರೂರು ಏನಿದೆ ಎಂಬುದು ಮನವರಿಕೆಯಾಗುತ್ತಿಲ್ಲ ಎಂದು ಹೇಳಿದ್ದರು. ಒಂದೊಮ್ಮೆ ವಿಶ್ವಾಸಮತವೇ ಕಾರಣವಾಗಿದ್ದರೆ, ಎಲ್ಲಾ ಸುರಕ್ಷಿತ ಕ್ರಮಗಳ ಮೂಲಕ ಸಣ್ಣ ಅಧಿವೇಶವನ್ನು ನಡೆಸಬಹುದು ಎಂದು ರಾಜ್ಯಪಾಲರು ಹೇಳಿದ್ದರು.

ನಂತರ ಅಶೋಕ್‌ ಗೆಹ್ಲೋಟ್‌ ಅವರು ಮೊದಲ ಮನವಿಯನ್ನು ಸಲ್ಲಿಸಿದ(ಜುಲೈ 23) ದಿನದಿಂದ ಲೆಕ್ಕಹಾಕಿ ಸರಿಯಾಗಿ 21ನೇ ದಿನ ಯಾವತ್ತು ಬರುತ್ತದೋ ಅದೇ ದಿನ ಅಧಿವೇಶನ ಆರಂಭಿಸಲು ಅವಕಾಶ ಕೋರಿ ಶಿಫಾರಸು ಮಾಡಿದ್ದರು.

SCROLL FOR NEXT