ದೇಶ

ಸೋಂಕಿತರ ಸಂಖ್ಯೆ ಹೆಚ್ಚಳ: ಕೊರೋನಾ ಪೀಡಿತ ಜಾಗತಿಕ ದೇಶಗಳ ಪಟ್ಟಿಯಲ್ಲಿ 9 ರಿಂದ 7ನೇ ಸ್ಥಾನಕ್ಕೇರಿದ ಭಾರತ!

Srinivasamurthy VN

ನವದೆಹಲಿ: ದೇಶಾದ್ಯಂತ ಕೊರೋನಾ ಆರ್ಭಟ ಜೋರಾಗಿದ್ದು, ದಿನೇ ದಿನೇ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕೊರೋನಾ ಪೀಡಿತ ಜಾಗತಿಕ ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಭಾರತ ದೇಶ ಇದೀಗ 7ನೇ  ಸ್ಥಾನಕ್ಕೇರಿದೆ.

ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾವೈರಸ್ ಟ್ರ್ಯಾಕರ್ ಮಾಹಿತಿ ನೀಡಿದ್ದು, ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಭಾರತವು ಈಗ ಏಳನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದ್ದು, ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,88,883 ಲಕ್ಷಕ್ಕೆ ಏರಿಕೆಯಾಗಿದ್ದು,  5,164 ಸೋಂಕಿತರು ಸಾವನ್ನಪ್ಪಿದ್ದಾರೆ. 

ಭಾನುವಾರ ವಿಶ್ವದಾದ್ಯಂತ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 5,934,936 ಆಗಿದ್ದು, 367,166 ಸಾವುಗಳು ಸೇರಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಫ್ರಾನ್ಸ್ ನಲ್ಲಿ 1,88,752 ಸೋಂಕಿತರಿದ್ದು, 18 ಲಕ್ಷ ಸೋಂಕಿತರನ್ನು ಹೊಂದಿರುವ ಅಮೆರಿಕ ಅಗ್ರ ಸ್ಥಾನದಲ್ಲಿದೆ.  ಅಮೆರಿಕದಲ್ಲಿ ಪ್ರಸ್ತುತ ಸೋಂಕಿತರ ಸಂಖ್ಯೆ 1,818,983ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 101,567ರಷ್ಟಿದೆ. 501,985 ಪ್ರಕರಣಗಳೊಂದಿಗೆ ಬ್ರೆಜಿಲ್ ಎರಡನೇ ಸ್ಥಾನದಲ್ಲಿದ್ದರೆ, ರಷ್ಯಾ 405,843 ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿದೆ.ಯುಕೆ, ಸ್ಪೇನ್ ಮತ್ತು ಇಟಲಿ ಸ್ಥಿತಿ ಭಾರತಕ್ಕಿಂತ  ಕೆಟ್ಟದಾಗಿದೆ. 

ನಿನ್ನೆ ಒಂದೇ ದಿನ ಭಾರತದಲ್ಲಿ ಸೋಂಕಿತರ ಸಂಖ್ಯೆ 8 ಸಾವಿರ ಗಡಿ ದಾಟಿದ್ದು, ಇದು ದಿನವೊಂದರ ಗರಿಷ್ಠ ಸೋಂಕಿತರ ಪ್ರಮಾಣವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿ ಮಹಾರಾಷ್ಟ್ರ ಮುಂದುವರೆದಿದೆ. ಇಲ್ಲಿ ಸೋಂಕಿತರ ಸಂಖ್ಯೆ  62228ಕ್ಕೆ ಏರಿಕೆಯಾಗಿದ್ದು, 2098 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

SCROLL FOR NEXT