ದೇಶ

ಐಎನ್ ಎಕ್ಸ್ ಮೀಡಿಯಾ ಕೇಸು: ಚಿದಂಬರಂ, ಕಾರ್ತಿ ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ಸಲ್ಲಿಕೆ

Sumana Upadhyaya

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಅವರ ವಿರುದ್ಧ ಐಎನ್ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ಸಲ್ಲಿಸಿದೆ.

ಪಾಸ್ ವರ್ಡ್ ಸುರಕ್ಷಿತ ಇ-ಚಾರ್ಚ್ ಶೀಟ್ ನ್ನು ಚಿದಂಬರಂ, ಅವರ ಪುತ್ರ ಕಾರ್ತಿ ಚಿದಂಬರಂ ಮತ್ತು ಪ್ರಕರಣದಲ್ಲಿ ಭಾಗಿಯಾದ ಸಂಬಂಧಪಟ್ಟವರ ವಿರುದ್ಧ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಎದುರು ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.
ಸದ್ಯ ಕೊರೋನಾ ಲಾಕ್ಡೌನ್ ಕಾರಣದಿಂದ ನ್ಯಾಯಾಲಯ ಕಲಾಪಗಳು ಸ್ಥಗಿತಗೊಂಡಿದ್ದು ಎಂದಿನಂತೆ ಕಾರ್ಯಕಲಾಪ ಆರಂಭಗೊಂಡ ನಂತರ ಆರೋಪಪಟ್ಟಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಾಧೀಶರು ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ.

ಆರೋಪಪಟ್ಟಿಯಲ್ಲಿ ಚಿದಂಬರಂ, ಅವರ ಪುತ್ರ ಕಾರ್ತಿ ಚಿದಂಬರಂ ಮಾತ್ರವಲ್ಲದೆ ಚಾರ್ಟೆರ್ಡ್ ಅಕೌಂಟೆಂಟ್ ಎಸ್ ಎಸ್ ಭಾಸ್ಕರರಾಮನ್ ಮತ್ತು ಇತರರ ಹೆಸರುಗಳೂ ಇವೆ.

ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಕೇಸಿನಲ್ಲಿ ಕಳೆದ ವರ್ಷ ಆಗಸ್ಟ್ 21ರಂದು ಸಿಬಿಐ, ಚಿದಂಬರಂ ಅವರನ್ನು ಬಂಧಿಸಿತ್ತು.ನಂತರ ಅಕ್ಟೋಬರ್ 16ರಂದು ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಬಂಧಿಸಿತ್ತು. 6 ದಿನ ಕಳೆದ ನಂತರ ಅಕ್ಟೋಬರ್ 22ರಂದು ಸುಪ್ರೀಂ ಕೋರ್ಟ್ ಸಿಬಿಐ ಸಲ್ಲಿಸಿದ್ದ ಕೇಸಿಗೆ ಜಾಮೀನು ನೀಡಿದರೆ ಜಾರಿ ನಿರ್ದೇಶನಾಲಯ ಕೇಸಿನಲ್ಲಿ ಕಳೆದ ಡಿಸೆಂಬರ್ 4ರಂದು ಜಾಮೀನು ಪಡೆದಿದ್ದರು.

ಚಿದಂಬರಂ ಅವರು 2007ರಲ್ಲಿ ಹಣಕಾಸು ಸಚಿವರಾಗಿದ್ದಾಗ ಐಎನ್ ಎಕ್ಸ್ ಮೀಡಿಯಾ ಗ್ರೂಪ್ ಗೆ ವಿದೇಶಿ ಹೂಡಿಕೆ ಪ್ರವರ್ಧನೆ ಮಂಡಳಿ(ಎಫ್ಐಪಿಬಿ)ಯ ಅನುಮತಿ ನೀಡುವಲ್ಲಿ ಅಕ್ರಮವೆಸಗಿ 305 ಕೋಟಿ ರೂಪಾಯಿ ಲಂಚ ಪಡೆದಿದ್ದರು ಎಂಬ ಆರೋಪದ ಮೇಲೆ 2017ರಲ್ಲಿ ಸಿಬಿಐ ಕೇಸು ದಾಖಲಿಸಿತ್ತು. ನಂತರ ಜಾರಿ ನಿರ್ದೇಶನಾಲಯ ಕೂಡ ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಪಟ್ಟಂತೆ ಕೇಸು ಹಾಕಿತ್ತು.

SCROLL FOR NEXT