ದೇಶ

ಕೇರಳದಲ್ಲಿ ಆನೆಗಳ ದುರಂತ ಸಾವು: ಗರ್ಭಿಣಿ ಆನೆಯಂತೆಯೇ ಮತ್ತೊಂದು ಹೆಣ್ಣಾನೆ ಕೊಲೆಯ ಶಂಕೆ

Nagaraja AB

ಕೊಚ್ಚಿ: ಗರ್ಭಿಣಿ ಆನೆ ಕೊಲೆ ಪ್ರಕರಣ ಕೇರಳ ರಾಜ್ಯದಾದ್ಯಂತ ತೀವ್ರ ಖಂಡನೆಗೆ ಗುರಿಯಾಗಿರುವಂತೆ ಕೊಲ್ಲಂ ಜಿಲ್ಲೆಯಲ್ಲಿ ಇದೇ ರೀತಿಯಲ್ಲಿ ಮತ್ತೊಂದು ಆನೆಯ ಕೊಲೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ತೀವ್ರ ರೀತಿಯ ಗಾಯಗಳಿಂದಾಗಿ ಹೆಣ್ಣಾನೆಯೊಂದು ಮೃತಪಟ್ಟಿರುವ ವಿಚಾರ ತಿಳಿದುಬಂದಿದೆ. 

ಕೇರಳದ ಮಲ್ಲಪ್ಪುರ ಜಿಲ್ಲೆಯಲ್ಲಿ ಗರ್ಭಿಣಿ ಆನೆಯೊಂದು ಆಹಾರ ಅರಸುತ್ತಾ ಕಾಡಿನಿಂದ ನಾಡಿಗೆ ಬಂದಾಗ ಕ್ರೂರಿ ಮಾನವರು ಪಟಾಕಿ ತುಂಬಿದ ಅನಾನಸ್ ನೀಡಿ ಗರ್ಭವತಿ ಆನೆ ದುರಂತ ಅಂತ್ಯಕ್ಕೆ ಕಾರಣವಾಗಿದ್ದರು. 

ಕೊಲ್ಲಂ ಜಿಲ್ಲೆಯ ಪುನಾಲೂರ್ ವಿಭಾಗದ ಪಠಾಣಪುರಂ ಅರಣ್ಯ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಇದೇ ರೀತಿಯಲ್ಲಿ ಮತ್ತೊಂದು ಹೆಣ್ಣಾನೆಯೊಂದು ಕೊಲೆಯಾಗಿರುವುದಾಗಿ ಅರಣ್ಯಾ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. 

ಏನು ತಿನ್ನದಂತೆ ಹಲ್ಲುಗಳನ್ನು ಮುರಿದಿರುವ, ದೇಹದ ಮೇಲೆ ಗಾಯಗಳಾಗಿರುವ ಆನೆಯೊಂದು ಹಿಂಡಿನಿಂದ ದೂರವಾಗಿ ನರಳುತ್ತಿರುವುದು ಕಂಡುಬಂದಿತ್ತು. ಅದರ ಹತ್ತಿರ ಅರಣ್ಯಾಧಿಕಾರಿಗಳು ತೆರಳಿದಾಗ ಅದು ಮತ್ತೆ ಕಾಡಿಗೆ ಓಡಿ ಹೋಗಿತ್ತು. ಆದರೆ, ಮರುದಿನ ಆನೆಯನ್ನು ಮತ್ತೆ ತನ್ನ ಹಿಂಡಿನಿಂದ ದೂರವಿರಿಸಲಾಯಿತು. ಸರಿಯಾದ ಚಿಕಿತ್ಸೆ ನೀಡಲಾಯಿತು ಆದರೆ ದುರದೃಷ್ಟವಶಾತ್ ಅದು ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ, ಮರಣೋತ್ತರ ಪರೀಕ್ಷೆ ವರದಿಯನ್ನು ಕಾಯಲಾಗುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. 

ಈ ಮಧ್ಯೆ  ಆನೆಗಳ ದುರಂತ ಸಾವಿನ ಬಗ್ಗೆ ಅರಣ್ಯಾಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದು ಅರಣ್ಯ ಸಚಿವ ಕೆ. ರಾಜು ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

SCROLL FOR NEXT