ದೇಶ

ಗುಜರಾತ್ ನ ರಾಸಾಯನಿಕ ಫ್ಯಾಕ್ಟರಿಯಲ್ಲಿ ಸ್ಫೋಟ: ಮೃತ ಕಾರ್ಮಿಕರ ಸಂಖ್ಯೆ 8ಕ್ಕೆ ಏರಿಕೆ, 50 ಮಂದಿಗೆ ಗಾಯ

Sumana Upadhyaya

ಬರೂಚ್ (ಗುಜರಾತ್): ಆಂಧ್ರ ಪ್ರದೇಶದ ವಿಶಾಖಪಟ್ಣಂ ನ ಫ್ಯಾಕ್ಟರಿಯಲ್ಲಿ ಕೆಲ ದಿನಗಳ ಹಿಂದೆ ಅನಿಲ ಸೋರಿಕೆಯಾಗಿ ಹಲವರು ಮೃತಪಟ್ಟಂತಹ ಘಟನೆ ಗುಜರಾತ್ ರಾಜ್ಯದ ಬರೂಚ್ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ.

ಇಲ್ಲಿನ ದಹೇಜ್ ಬಳಿ ಯಶಸ್ವಿ ರಸಯಾನ್ ರಾಸಾಯನಿಕ ಫ್ಯಾಕ್ಟರಿಯ ಬಾಯ್ಲರ್ ನಲ್ಲಿ ಸ್ಫೋಟವುಂಟಾಗಿ ಮೃತಪಟ್ಟ ಕಾರ್ಮಿಕರ ಸಂಖ್ಯೆ 8ಕ್ಕೇರಿದೆ, ಇನ್ನು 50 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಫ್ಯಾಕ್ಟರಿಯ ಸಮೀಪ ಮೆಥನಾಲ್ ಮತ್ತು ಕ್ಸೈಲನ್ ರಾಸಾಯನಿಕ ಕಂಪೆನಿಗಳು ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹತ್ತಿರದ ಲುವಾರ ಮತ್ತು ಲಖಿಗಾಮ್ ಗ್ರಾಮಗಳ ಸುಮಾರು 4,800 ಮಂದಿಯನ್ನು ಅಧಿಕಾರಿಗಳು ಬೇರೆ ಕಡೆಗೆ ವರ್ಗಾಯಿಸಿದ್ದಾರೆ. ದುರ್ಘಟನೆ ನಡೆಯುವ ಸಂದರ್ಭದಲ್ಲಿ ಫ್ಯಾಕ್ಟರಿಯೊಳಗೆ ಸುಮಾರು 250 ಮಂದಿ ಕಾರ್ಮಿಕರಿದ್ದರು ಎಂದು ದಹೇಜ್ ಮಾರಿನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿಪುಲ್ ಗಾಗಿಯಾ ತಿಳಿಸಿದ್ದಾರೆ.

ಸುಮಾರು 18ರಿಂದ 20 ಕಾರ್ಮಿಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ, ಅಗ್ನಿ ಶಾಮಕ ಸಿಬ್ಬಂದಿಗೆ ಸ್ಪೋಟವನ್ನು ನಿಯಂತ್ರಣಕ್ಕೆ ತರಲು ಸುಮಾರು 6 ಗಂಟೆ ಹಿಡಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟಕ್ಕೆ ಬಿಜೆಪಿ ಸರ್ಕಾರವೇ ಕಾರಣ:ಕಾರ್ಖಾನೆಗಳಲ್ಲಿ ಅಗ್ನಿದುರಂತಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಸುರಕ್ಷತಾ ಕ್ರಮಗಳನ್ನು ವಹಿಸದೆ ಅವಕಾಶ ಮಾಡಿಕೊಟ್ಟ ಬಿಜೆಪಿ ಸರ್ಕಾರವೇ ದುರ್ಘಟನೆಗೆ ಕಾರಣ ಎಂದು ರಾಜ್ಯಸಭಾ ಸದಸ್ಯ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಆರೋಪಿಸಿದ್ದಾರೆ.

SCROLL FOR NEXT