ದೇಶ

ಫಲಪ್ರದವಾಗಲಿದೆಯೇ ಭಾರತ-ಚೀನಾ ಗಡಿ ಮಾತುಕತೆ?: ಜೂ.6ಕ್ಕೆ ಉನ್ನತ ಹೈಕಮಾಂಡ್ ಮಟ್ಟದ ಸಭೆ

Sumana Upadhyaya

ನವದೆಹಲಿ:ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿರುವ ಸಂದದರ್ಭದಲ್ಲಿ ಮಾತುಕತೆ ಮೂಲಕ ಬಗೆಹರಿಸಲು ಎರಡೂ ದೇಶಗಳು ಸಜ್ಜಾಗಿವೆ.

ಲೆಫ್ಟಿನೆಂಟ್ ಜನರಲ್ ಮಟ್ಟದಲ್ಲಿ ನಿರ್ದಿಷ್ಟ ಪ್ರಸ್ತಾಪಗಳ ಬಗ್ಗೆ ಎರಡೂ ಕಡೆಯವರು ಇದೇ 6ರಂದು ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ ಎಂದು ಸೇನಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. ನಾಡಿದ್ದಿನ ಮಾತುಕತೆಯಲ್ಲಿ ಎರಡೂ ಕಡೆಯ 7 ಮಂದಿ ಅಧಿಕಾರಿಗಳು ಇರುತ್ತಾರೆ.

ಭಾರತದ ಕಡೆಯಿಂದ ಲೇಹ್ ಮೂಲದ 14 ಕಾರ್ಪ್ಸ್, ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಪ್ರತಿನಿಧಿಸಲಿದ್ದಾರೆ.  ಪೂರ್ವ ಲಡಾಖ್‌ನ ಮೂರು ಪ್ರದೇಶಗಳಾದ ಪಂಗೊಂಗ್ ತ್ಸೊ, ಗಾಲ್ವಾನ್ ವ್ಯಾಲಿ ಮತ್ತು ಡೆಮ್‌ಚಾಕ್‌ನಲ್ಲಿ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲಿ ಆ ವಿಷಯಗಳನ್ನು ಮಾತುಕತೆಯಲ್ಲಿ ಭಾರತದ ಕಡೆಯಿಂದ ಪ್ರಸ್ತಾಪಗಳನ್ನು ಮಂಡಿಸುವ ನಿರೀಕ್ಷೆಯಿದೆ.

ಮಾತುಕತೆ ವೇಳೆ ಭಾರತೀಯ ಮಿಲಿಟರಿ ಮಂಡಿಸುವ ಪ್ರಸ್ತಾಪಗಳು ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಆದರೆ ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆ ಬಳಿ ಯಥಾಸ್ಥಿತಿ ಮುಂದುವರಿಸಲು ಭಾರತ ಒತ್ತಾಯಿಸಲಿದೆ ಎಂದು ತಿಳಿದುಬಂದಿದೆ.

ಎರಡೂ ರಾಷ್ಟ್ರಗಳು ಈಗಾಗಲೇ ಸ್ಥಳೀಯ ಕಮಾಂಡರ್ ಮತ್ತು ಮೇಜರ್ ಜನರಲ್ ರ್ಯಾಂಕ್ ಅಧಿಕಾರಿಗಳ ಮಟ್ಟದಲ್ಲಿ 10 ಸುತ್ತುಗಳ ಮಾತುಕತೆ ನಡೆಸಿದ್ದು ಅದರಿಂದ ಯಾವುದೇ ಧನಾತ್ಮಕ ಅಂಶಗಳು ಹೊರಬೀಳಲಿಲ್ಲ.

ಈ ಮಧ್ಯೆ ಭಾರತ ಮತ್ತು ಚೀನಾ ದೇಶಗಳ ಸೈನಿಕರು ನಾಲ್ಕು ಸ್ಥಳಗಳ ಪೈಕಿ ಒಂದು ಸ್ಥಳದಿಂದ ಸೈನ್ಯವನ್ನು ಹಿಂತೆಗೆದುಕೊಂಡಿವೆ. ಗಲ್ವಾನ ಕಣಿವೆಯಲ್ಲಿ ನಿಯೋಜನೆಗೊಂಡಿದ್ದ ಚೀನಾ ಸೈನಿಕ ಪಡೆ 2 ಕಿಲೋ ಮೀಟರ್ ಹಿಂದಕ್ಕೆ ಮತ್ತು ಭಾರತ ಸೇನಾಪಡೆ 800 ಮೀಟರ್ ಹಿಂದಕ್ಕೆ ಹೋಗಿದೆ ಎಂದು ತಿಳಿದುಬಂದಿದೆ.

ಮೇ 5-6ರ ಮಧ್ಯರಾತ್ರಿಯಿಂದ ಚೀನಾದ ಸೈನಿಕರು ಫಿಂಗರ್ 4 ಮತ್ತು ಫಿಂಗರ್ 5 ನಡುವೆ ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿತು. ಇದಕ್ಕೆ ಪ್ರತಿಯಾಗಿ ಭಾರತ ಸೇನೆ ಗಡಿ ವಾಸ್ತವ ರೇಖೆಯಲ್ಲಿ ತನ್ನ ಸೇನೆಯನ್ನು ನಿಯೋಜಿಸಿತು. ಚೀನಾದ ಸೇನೆ ಫಿಂಗರ್ 4 ಹೊರತುಪಡಿಸಿ ಇನ್ನೂ ಮೂರು ಕೇಂದ್ರಗಳಲ್ಲಿ ಬೂದು ವಲಯಗಳನ್ನು (ಎರಡು ಬದಿಗಳ ಹಕ್ಕು ರೇಖೆಗಳ ನಡುವಿನ ಮಧ್ಯದ ಪ್ರದೇಶ) ಪ್ರವೇಶಿಸಿತು. ಚೀನಿಯರು ಪೆಟ್ರೋಲಿಂಗ್ ಪಾಯಿಂಟ್ 14, ಪೆಟ್ರೋಲಿಂಗ್ ಪಾಯಿಂಟ್ 15 ಮತ್ತು ಗಾಲ್ವಾನ್ ಕಣಿವೆಯ ಗೊಗ್ರಾ ಪೋಸ್ಟ್ನಲ್ಲಿ ತಮ್ಮ ಹಕ್ಕು ಸ್ಥಾಪನೆಯನ್ನು ನಿಯೋಜಿಸಿದೆ.

SCROLL FOR NEXT