ದೇಶ

ಕಾಡಾನೆ ಸಾವು ಪ್ರಕರಣ ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ: ವರದಿ ಕೇಳಿದ ಕೇಂದ್ರ ಸರ್ಕಾರ

Sumana Upadhyaya

ನವದೆಹಲಿ/ತಿರುವನಂತಪುರಂ: ಗರ್ಭಿಣಿ ಕಾಡಾನೆಯನ್ನು ಕೊಂದು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ವನ್ಯಜೀವಿ ಅಪರಾಧ ತನಿಖಾ ತಂಡದ ಮೂಲಕ ತನಿಖೆ ನಡೆಸಲಾಗುವುದು ಎಂದು ಕೇರಳ ಸರ್ಕಾರ ಪ್ರಕಟಿಸಿದೆ.

ಶಕ್ತಿಶಾಲಿ ಪಟಾಕಿಗಳನ್ನು ತುಂಬಿದ ಅನಾನಸನ್ನು ತಿಂದ ಕಾಡಾನೆಯ ಬಾಯಲ್ಲಿ ಪಟಾಕಿ ಸ್ಫೋಟಿಸಿ ಆನೆ ಕಳೆದ ವಾರ ಪಾಲಕ್ಕಾಡ್ ಜಿಲ್ಲೆಯ ಸೈಲೆಂಟ್ ವ್ಯಾಲಿ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿತ್ತು.

ಈ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಅಪಾರ ಖಂಡನೆ ವ್ಯಕ್ತವಾಗುತ್ತಿದ್ದಂತೆ ಕಾಡಾನೆ ಸಾವಿನ ಬಗ್ಗೆ ಪ್ರಾಥಮಿಕ ತನಿಖೆಗೆ ಆದೇಶ ಹೊರಡಿಸಿ ಸಾವಿಗೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಘಟನೆ ನಡೆದ ಅರಣ್ಯ ಪ್ರದೇಶದಲ್ಲಿ ಸದ್ಯ ಕೋಝಿಕ್ಕೋಡ್ ನಿಂದ ವನ್ಯಜೀವಿ ಅಪರಾಧ ತನಿಖಾ ತಂಡ ಆಗಮಿಸಿ ತನಿಖೆ ಮಾಡುತ್ತಿದೆ.

ಈ ಮಧ್ಯೆ ಕೇರಳದಲ್ಲಿ ಗರ್ಭಿಣಿ ಕಾಡಾನೆ ಸಾವಿನ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವದೇಕರ್ ತಿಳಿಸಿದ್ದಾರೆ.

ಅನಾನಸ್ ನಲ್ಲಿ ಪಟಾಕಿ ತುಂಬಿಸಿ ಅದನ್ನು ಆನೆ ತಿಂದು ಸಾವಿಗೆ ಕಾರಣರಾದವರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಲಾಗುವುದು. ಪ್ರಕರಣ ಕುರಿತು ಸೂಕ್ತ ತನಿಖೆ ಕೈಗೊಳ್ಳಲಾಗುವುದು, ಈ ಬಗ್ಗೆ ಕೇರಳ ಸರ್ಕಾರದಿಂದ ವಿಸ್ತೃತ ವರದಿಯನ್ನು ಕೇಳಿದ್ದೇವೆ ಎಂದು ಪ್ರಕಾಶ್ ಜಾವದೇಕರ್ ತಿಳಿಸಿದ್ದಾರೆ.

ಹಣ್ಣಿನೊಳಗೆ ಪಟಾಕಿ ತುಂಬಿಸಿ ಪ್ರಾಣಿಗಳನ್ನು ಸಾಯಿಸುವುದು ಅತ್ಯಂತ ಹೀನಕೃತ್ಯ, ಇದನ್ನು ಭಾರತೀಯ ಸಂಸ್ಕೃತಿಯಲ್ಲಿ ಒಪ್ಪಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಮಾಜದ ವಿವಿಧ ವರ್ಗಗಳಿಂದ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗುತ್ತಿದೆ. ಬಾಲಿವುಡ್ ನಟ, ನಟಿಯರು ಕೂಡ ಧ್ವನಿಯೆತ್ತಿದ್ದು ಆನೆಯ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಮಧ್ಯೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಉನ್ನತ ಅರಣ್ಯ ಅಧಿಕಾರಿಯೊಬ್ಬರು, ಮತ್ತೊಂದು ಹೆಣ್ಣಾನೆ ಇದೇ ರೀತಿಯ ಘಟನೆಯಲ್ಲಿ ಕಳೆದ ಏಪ್ರಿಲ್ ನಲ್ಲಿ ಕೊಲ್ಲಂ ಜಿಲ್ಲೆಯ ಪತನಪುರಂ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿತ್ತು, ಅದು ಗೊತ್ತಾಗುವಾಗ ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತು ಎಂದಿದ್ದಾರೆ.

SCROLL FOR NEXT