ದೇಶ

ರಾಜ್ಯಸಭೆ ಚುನಾವಣೆ: ಗುಜರಾತ್ ಕಾಂಗ್ರೆಸ್ ಶಾಸಕರು ರಾಜಸ್ಥಾನದ ರೆಸಾರ್ಟ್ ಗೆ ಶಿಫ್ಟ್

Lingaraj Badiger

ಅಹಮದಾಬಾದ್: ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತಿನ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್, ಮುಂದೆ ಸಂಭಾವ್ಯ ರಾಜೀನಾಮೆಯನ್ನು ತಪ್ಪಿಸುವ ಉದ್ದೇಶದಿಂದ ಉಳಿದ ಶಾಸಕರನ್ನು ನೆರೆ ರಾಜ್ಯ ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರಸ್ತೆಯಲ್ಲಿರುವ ರೆಸಾರ್ಟ್ ಗೆ ಶಿಫ್ಟ್ ಮಾಡಲು ಸೋಮವಾರ ನಿರ್ಧರಿಸಿದೆ.

ಕಳೆದ ವಾರ ಕಾಂಗ್ರೆಸ್ ನ ಮೂವರು ಶಾಸಕರು ರಾಜೀನಾಮೆ ನೀಡಿದ್ದು, ಇದರೊಂದಿಗೆ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ 65ಕ್ಕೆ ಇಳಿಕೆಯಾಗಿದೆ. ಈಗ ಮತ್ತಷ್ಟು ಶಾಸಕರ ಕುದುರೆ ವ್ಯಾಪಾರದ ಭೀತಿಯಿಂದ ಕಾಂಗ್ರೆಸ್ ಎರಡು ದಿನಗಳಿಂದ ತನ್ನ ಶಾಸಕರನ್ನು ವಿವಿಧ ರೆಸಾರ್ಟ್ ಗಳಿಗೆ ಶಿಫ್ಟ್ ಮಾಡಿದೆ.

ಭಾನುವಾರ ರಾತ್ರಿ ಕಾಂಗ್ರೆಸ್ ಉತ್ತರ ಗುಜರಾತ್ ನ ಸುಮಾರು 20 ಶಾಸಕರನ್ನು ಸಿರೋಹಿ ರೆಸಾರ್ಟ್ ಗೆ ಶಿಫ್ಟ್ ಮಾಡಿದ್ದು, ಉಳಿದ ಶಾಸಕರನ್ನು ಸಿರೋಹಿ ರೆಸಾರ್ಟ್ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

"ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನ ಎಲ್ಲ ಶಾಸಕರನ್ನು ಒಂದೇ ಸ್ಥಳದಲ್ಲಿ, ಸಿರೋಹಿಯಲ್ಲಿರುವ ರೆಸಾರ್ಟ್‌ಗೆ ಸ್ಥಳಾಂತರಿಸಲು ಪಕ್ಷ ನಿರ್ಧರಿಸಿದೆ. ಹಲವು ಶಾಸಕರು ಈಗಾಗಲೇ ರೆಸಾರ್ಟ್ ತಲುಪಿದ್ದಾರೆ, ಉಳಿದವರು ಇಂದು ಸಂಜೆ ವೇಳೆಗೆ ರೆಸಾರ್ಟ್ ತಲುಪುತ್ತಾರೆ" ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಬಿಜೆಪಿಯು ತನ್ನ ಶಾಸಕರನ್ನು ಬ್ಲಾಕ್‌ಮೇಲ್ ಮಾಡುವ, ಬೆದರಿಸುವ ಮತ್ತು ಹಣದ ಆಮಿಷವೊಡ್ಡುವ ಮೂಲಕ ರಾಜೀನಾಮೆ ಕೊಡಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
 

SCROLL FOR NEXT