ದೇಶ

ದುಬೈ ನಲ್ಲಿ ಪತಿಯ ಸಾವು, ಇತ್ತ ಕೇರಳದಲ್ಲಿ ಸುದ್ದಿ ತಿಳಿಯದ ಗರ್ಭಿಣಿ ಪತ್ನಿಗೆ ಹೆಣ್ಣು ಮಗು ಜನನ!

Srinivas Rao BV

ಕೋಯಿಕ್ಕೋಡ್: ವಿಧಿಯಾಟ ಕೆಲವೊಮ್ಮೆ ಎಷ್ಟು ಕಠೋರವಾಗಿರುತ್ತದೆ ಎಂಬುದನ್ನು ಮತ್ತೊಮ್ಮೆ ನೆನಪಿಸುವಂತಿದೆ ಈ ಘಟನೆ. ಆಥಿರಾ ಎಂಬ ಮಹಿಳೆ ತುಂಬು ಗರ್ಭಿಣಿ, ದುಬೈ ನಿಂದ ಆಕೆಯ ಪತಿ ನಿತಿನ್ ಚಂದ್ರನ್ (28) ಕೊರೋನಾ ಸಂದರ್ಭದಲ್ಲಿ ವಿದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ನೆರವು ನೀಡುತ್ತಿದ್ದರು. ಆದರೆ ಆತ ಭಾರತಕ್ಕೆ ವಾಪಸ್ಸಾಗುವುದಕ್ಕೆ ಮುನ್ನ ಮೃತಪಟ್ಟಿದ್ದಾನೆ. ಇತ್ತ ಇದರ ಸುದ್ದಿ ತಿಳಿಯದ ಕೇರಳದಲ್ಲಿದ್ದ ಆಥಿರಾಗೆ ಹೆಣ್ಣು ಮಗು ಹೆರಿಗೆಯಾಗಿದೆ. 

ನಿತಿನ್ ಚಂದ್ರನ್ ದಂಪತಿ, ಕೊರೋನಾ ಸಂದರ್ಭದಲ್ಲಿ ದುಬೈ ನಲ್ಲಿ ಸಿಲುಕಿದ್ದ ಭಾರತೀಯ ಮೂಲದವರು, ಪ್ರಮುಖವಾಗಿ ಗರ್ಭಿಣಿ ಮಹಿಳೆಯರು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸಹಾಯ ಮಾಡಿದ್ದರು. ಕೋವಿಡ್-19 ಲಾಕ್ ಡೌನ್ ಇರಬೇಕಾದರೆ ವಲಸಿಗರನ್ನು ಶೀಘ್ರವೇ ಅವರ ಮನೆಗಳಿಗೆ ವಾಪಾಸು ಕಳುಹಿಸಲು ಮನವಿ ಮಾಡಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಆಥಿರಾ ಹೆರಿಗೆಗಾಗಿ ಒಂದು ತಿಂಗಳ ಮುಂಚೆಯೇ ಭಾರತಕ್ಕೆ ಆಗಮಿಸಿದ್ದರು. ಆದರೆ ನಿತಿನ್ ಚಂದ್ರನ್ ಗೆ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಅನಾರೋಗ್ಯ ಕಾಡುತ್ತಿತ್ತು. ಸೋಮವಾರದಂದು ತೀವ್ರ ಅನಾರೋಗ್ಯದಿಂದ ನಿತಿನ್ ಚಂದ್ರನ್ ದುಬೈ ನಲ್ಲಿ ಮೃತಪಟ್ಟಿದ್ದಾರೆ. ಈ ಮಾಹಿತಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಕಾಣಿಸುತ್ತಿದ್ದಂತೆಯೇ ಅಥಿರಾ ಕುಟುಂಬ ಸದಸ್ಯರು ಆಕೆಯನ್ನು ಕೋಯಿಕ್ಕೋಡ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಸ್ಥಿತಿಯನ್ನು ಗಮನಿಸಿದ ವೈದ್ಯರು ಅವಧಿಗೂ ಮುನ್ನ ಸಿ ಸೆಕ್ಷನ್ ಮಾಡಿ ಹೆರಿಗೆ ಮಾಡಿಸಿದ್ದಾರೆ. ಪತಿಯ ವಿಯೋಗದ ನಡುವೆಯೇ ಆಥಿರಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ದುಬೈ ನ ಇಂಟರ್ನ್ಯಾಷನಲ್ ಸಿಟಿ ಅಪಾರ್ಟ್ಮೆಂಟ್ ನಲ್ಲಿ ನಿತಿನ್ ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ ನಿತಿನ್ ತೀವ್ರ ಅನಾರೋಗ್ಯಕ್ಕೀಡಾಗಿರುವುದನ್ನು ಅಲ್ಲಿನ ಅವರ ಸ್ನೇಹಿತರು ಸಂಬಂಧಿಕರು ಕೇರಳದಲ್ಲಿರುವ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ತೆರಳುವುದಕ್ಕೂ ಮುನ್ನ ತಾನು ನಿತಿನ್ ಜೊತೆ ಮಾತನಾಡಬೇಕೆಂದು ಆಥಿರಾ ಪಟ್ಟು ಹಿಡಿದರೂ ಸಹ ಒತ್ತಡ ಆಕೆಗೆ ಮುಳುವಾಗಬಹುದೆಂದು ಕುಟುಂಬ ಸದಸ್ಯರು ಪರಿಸ್ಥಿತಿಯನ್ನು ನಿಭಾಯಿಸಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಿತಿನ್ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಯತ್ನಿಸುತ್ತಿದ್ದಾರೆ. 

SCROLL FOR NEXT