ದೇಶ

ತಬ್ಲಿಘಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ: ಕಾನ್ಪುರ ವೈದ್ಯಕೀಯ ಕಾಲೇಜು ಪ್ರಾಂಶುಪಾಲರು ವಜಾ! 

Srinivas Rao BV

ಕಾನ್ಪುರ: ತಬ್ಲಿಘಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ವೈದ್ಯಕೀಯ ಕಾಲೇಜು (ಜಿಎಸ್ ವಿಎಂ) ನ ಪ್ರಾಂಶುಪಾಲರನ್ನು ಉತ್ತರ ಪ್ರದೇಶ ಸರ್ಕಾರ ವಜಾಗೊಳಿಸಿದೆ. 

ಪ್ರಾಂಶುಪಾಲರಾದ ಡಾ. ಆರತಿ ದವೆ ಲಾಲ್ ಚಾಂದನಿ ಅವರು ಮಾತನಾಡಿರುವ ವಿಡಿಯೋ ಕಳೆದ ವಾರ ವೈರಲ್ ಆಗಿತ್ತು. ಲಾಲ್ ಚಾಂದನಿ ಅವರ ಸ್ಥಾನಕ್ಕೆ ಡಾ. ಆರ್ ಬಿ ಕಮಲ್ ಅವರನ್ನು ನಿಯೋಜಿಸಲಾಗಿದೆ.  

ಕಳೆದ ವಾರ ಲಾಲ್ ಚಾಂದನಿ ಅವರನ್ನು ಝಾನ್ಸಿಯ ವೈದ್ಯಕೀಯ ಕಾಲೇಜಿಗೆ ವರ್ಗಾವಣೆ ಮಾಡಿರುವುದರ ಬಗ್ಗೆ ವದಂತಿಗಳು ಹಬ್ಬಿತ್ತು. ಆದರೆ ಅದನ್ನು ನಂತರ ನಿರಾಕರಿಸಲಾಗಿತ್ತು. ಈಗ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

ಕೋವಿಡ್-19 ಹೆಚ್ಚು ಪ್ರಮಾಣದಲ್ಲಿ ಹರಡಲು ಕಾರಣರಾದ ತಬ್ಲಿಘಿ ಜಮಾತ್ ನ ಸದಸ್ಯರ ವಿರುದ್ಧ ಹೇಳಿಕೆ ನೀಡಿದ್ದ ಡಾ.ಲಾಲ್ ಚಾಂದನಿ, ಜಮಾತಿಗಳನ್ನು ಭಯೋತ್ಪಾದಕರೊಂದಿಗೆ ಹೋಲಿಕೆ ಮಾಡಿದ್ದರು. ಅಷ್ಟೇ ಅಲ್ಲದೇ ರಾಜ್ಯ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದರು. 

ಈ ವಿಡಿಯೋ ಹಾಗೂ ವಿವಾದಕ್ಕೆ ಸಂಬಂಧಿಸಿದಂತೆ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬ್ರಹ್ಮ್ ದೇವ್ ತಿವಾರಿ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್  ದುಬೆ ಅವರಿಗೆ ಸಲ್ಲಿಸಿದ್ದ ವರದಿಯ ಆಧಾರದಲ್ಲಿ ಲಾಲ್ ಚಾಂದನಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 

ಆದರೆ ತಮ್ಮ ವಿರುದ್ಧದ ಆರೋಪಗಳನ್ನು ಡಾ.ಲಾಲ್ ಚಾಂದನಿ ನಿರಾಕರಿಸಿದ್ದು, ತಮ್ಮನ್ನು ಬೆದರಿಸಿ ಹಣ ವಸೂಲಿ ಮಾಡುವ ಉದ್ದೇಶದಿಂದ ಕಾನ್ಪುರದ ಸ್ಥಳೀಯ ಪತ್ರಕರ್ತರೊಬ್ಬರು ತಾವು ಮಾತನಾಡಿರುವ ವಿಡಿಯೋವನ್ನು ಮಾರ್ಫ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ವಿರುದ್ಧ ದೂರು ನೀಡಿ ಎಫ್ಐಆರ್ ದಾಖಲಾಗುವಂತೆ ಮಾಡುವುದಾಗಿ ಅವರು ಹೇಳಿದ್ದರು. ಆದರೆ ಈ ವರೆಗೂ ಯಾವುದೇ ಎಫ್ಐಅರ್ ದಾಖಲಾಗಿಲ್ಲ. ತಾವು ವಿಡಿಯೋದಲ್ಲಿ ಎಲ್ಲೂ ಮುಸ್ಲಿಮರು, ತಬ್ಲಿಘಿಗಳೆಂಬ ಪದಗಳನ್ನು ಬಳಕೆ ಮಾಡಿಲ್ಲ, ತಾವೂ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಪಾಠ ಮಾಡಿರುವುದಾಗಿ ಹೇಳಿದ್ದಾರೆ. 

SCROLL FOR NEXT