ದೇಶ

ಚೆನ್ನೈ ಮಾತ್ರ ಸಂಪೂರ್ಣ ಲಾಕ್ ಡೌನ್ ಏಕೆ ಮಾಡಬಾರದು?: ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

Lingaraj Badiger

ಚೆನ್ನೈ: ಚೆನ್ನೈ ನಗರದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಹಾಮಾರಿಯನ್ನು ನಿಯಂತ್ರಿಸಲು ಸಂಪೂರ್ಣ ಲಾಕ್ ಡೌನ್ ಏಕೆ ಮಾಡಬಾರದು? ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರವನ್ನು ಪ್ರಶ್ನಿಸಿದೆ.

ಕೊವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ ಸೋಂಕಿತರ ಸಂಖ್ಯೆ ವಿಶೇಷವಾಗಿ ಚೆನ್ನೈ ನಗರ ಮತ್ತು ಹೊರವಲಯದಲ್ಲಿ ಆತಂಕಕಾರಿಯಾಗಿ ಹೆಚ್ಚುತ್ತಿದೆ ಎಂದು ನ್ಯಾಯಮೂರ್ತಿಗಳಾದ ವಿನೀತ್ ಕೋಠಾರಿ ಮತ್ತು ಆರ್ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

"ಆದ್ದರಿಂದ, ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಲ್ಪ ಸಮಯದವರೆಗೆ ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ಸಂಪೂರ್ಣ ಲಾಕ್ ಡೌನ್ ಅಥವಾ ಕರ್ಫ್ಯೂ ಒಳಗೊಂಡ ಯಾವುದೇ ವಿಶೇಷ ಯೋಜನೆಯನ್ನು ಸರ್ಕಾರ ರೂಪಿಸಿದೆಯೇ ಎಂಬುದನ್ನು ತಿಳಿದುಕೊಳ್ಳಲು ನಾವು ಬಯಸುತ್ತೇವೆ" ಎಂದು ನ್ಯಾಯಾಧೀಶರು ರಾಜ್ಯ ಸರ್ಕಾರದ ಪರ ಅರ್ಜಿದಾರ ವಿ ಜಯಪ್ರಕಾಶ್ ನಾರಾಯಣ್ ಅವರನ್ನು ಪ್ರಶ್ನಿಸಿದರು.

ನಾವು ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಮತ್ತು ನಗರದ ಪ್ರಜೆಗಳಿಗಾಗಿ ಲಾಕ್ ಡೌನ್ ಪ್ರಸ್ತಾಪಿಸಿದ್ದೇವೆ. ಈ ಸಂಬಂಧ ಯಾವುದೇ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ(ಪಿಐಎಲ್) ಅಥವಾ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸುತ್ತಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.

ಚೆನ್ನೈ ನಗರದಲ್ಲಿಯೇ 26 ಸಾವಿರ ಪ್ರಕರಣಗಳು, ಅಂದರೆ ರಾಜ್ಯದ ಶೇ. 70ರಷ್ಟು ಪ್ರಕರಣಗಳು ರಾಜಧಾನಿಯಲ್ಲೇ ವರದಿಯಾಗಿವೆ ಮತ್ತು ನಗರದಲ್ಲಿ 326 ಮಂದಿ ಕೊರೋನಾಗೆ ಬಲಿಯಾಗಿರುವುದು ಕೋರ್ಟ್ ಆತಂಕಕ್ಕೆ ಕಾರಣವಾಗಿದೆ.

SCROLL FOR NEXT