ದೇಶ

ರಾಜಸ್ಥಾನ: ಕುದುರೆ ವ್ಯಾಪಾರದ ಭೀತಿ, ಶಾಸಕರನ್ನು ರೆಸಾರ್ಟ್ ನಲ್ಲಿ ಇರಿಸಿದ ಕಾಂಗ್ರೆಸ್!

Nagaraja AB

ಜೈಪುರ: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ  ಶಾಸಕರ ಕುದುರೆ ವ್ಯಾಪಾರದ ಭೀತಿಯಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷ ತನ್ನ ಸುಮಾರು 100 ಶಾಸಕರು ಹಾಗೂ ಪಕ್ಷೇತರ ಶಾಸಕರನ್ನು ದೆಹಲಿ- ಜೈಪುರ ಹೆದ್ದಾರಿಯ ರೆಸಾರ್ಟ್ ವೊಂದರಲ್ಲಿ ಇರಿಸಿದೆ.

ಗುರುವಾರ ರೆಸಾರ್ಟ್ ನಲ್ಲಿರುವ ಶಾಸಕರು  ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ.ಕುದುರೆ ವ್ಯಾಪಾರದ ಭೀತಿಯಲ್ಲಿ ಶಾಸಕರನ್ನು ರೆಸಾರ್ಟ್ ಇಲ್ಲಿ ಇರಿಸಲಾಗಿದೆ ಎಂಬುದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿರುವುದರಿಂದ ರೆಸಾರ್ಟ್ ನಲ್ಲಿ ಶಾಸಕರನ್ನು ಇರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್  ಗೆಹ್ಲೋಟ್ ಬುಧವಾರ ಹೇಳಿಕೆ ನೀಡಿದ್ದರು. 

ಏಂಟು- ಹತ್ತು ಶಾಸಕರು ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣದಿಂದ ಕಳೆದ ರಾತ್ರಿ ಮನೆಗೆ ಹಿಂತಿರುಗಿದ್ದು, ಇಂದು ವಾಪಸ್ಸಾಗಲಿದ್ದಾರೆ. ಉಳಿದ 100 ಶಾಸಕರು ಕಳೆದ ರಾತ್ರಿ ರೆಸಾರ್ಟ್ ನಲ್ಲಿದ್ದರು ಎಂದು ರಾಜಸ್ಥಾನ ಸರ್ಕಾರದ ಮುಖ್ಯ ಸಚೇತಕ ಮಹೇಶ್ ಜೋಷಿ ಇಂದು ತಿಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ. ಸಿ. ವೇಣುಗೋಪಾಲ್ ಮತ್ತು ನೀರಾಜ್ ಡಾಂಗಿ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಇಂದು ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.

ರಾಜ್ಯಸಭಾ ಸ್ಥಾನಕ್ಕಾಗಿ ರಾಜಸ್ಥಾನದಿಂದ ಕಾಂಗ್ರೆಸ್ ಹಾಗೂ ಬಿಜೆಪಿಯ ತಲಾ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ 107 ಕಾಂಗ್ರೆಸ್ 107 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ಪಕ್ಷಕ್ಕೆ 12 ರಿಂದ 13 ಪಕ್ಷೇತರ ಶಾಸಕರ ಬೆಂಬಲವಿದ್ದರೆ ಬಿಜೆಪಿಗೆ ಆರ್ ಎಲ್ ಪಿಯ ಮೂವರು ಶಾಸಕರ ಬೆಂಬಲವಿದೆ. ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಷ್ಟು ಬಲವನ್ನು ಕಾಂಗ್ರೆಸ್ ಹೊಂದಿದೆ. 

SCROLL FOR NEXT