ದೇಶ

ಜಮ್ಮು-ಕಾಶ್ಮೀರದ ಕುಲ್ಗಾಮ್, ಅನಂತ್ ನಾಗ್ ಜಿಲ್ಲೆಗಳಲ್ಲಿ ಎನ್ ಕೌಂಟರ್: ನಾಲ್ವರು ಉಗ್ರರ ಹತ್ಯೆ

Sumana Upadhyaya

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್ ಕೌಂಟರ್ ಗಳು ಮುಂದುವರಿಯುತ್ತಿದ್ದು ಶನಿವಾರ ಬೆಳಗ್ಗೆ 4 ಉಗ್ರರನ್ನು ಹತ್ಯೆಗೈಯುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ.

ಕಾಶ್ಮೀರದ ಕುಲ್ಗಾಮ್ ಮತ್ತು ಅನಂತ್ ನಾಗ್ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ನಾಲ್ಕು ಮಂದಿ ಉಗ್ರರು ಹತರಾಗಿದ್ದಾರೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಕುಲ್ಗಾಮ್ ಜಿಲ್ಲೆಯ ನಿಪೊರಾ ಪ್ರದೇಶದಲ್ಲಿ ಎನ್ ಕೌಂಟರ್ ಇಂದು ನಸುಕಿನ ಜಾವ ಆರಂಭವಾಯಿತು. ಅದರಲ್ಲಿ ಇಬ್ಬರು ಅಪರಿಚಿತ ಉಗ್ರರನ್ನು ಭಾರತೀಯ ಸೇನೆ ಯೋಧರು ಹತ್ಯೆಗೈದಿದ್ದಾರೆ. ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಹೆಚ್ಚಿನ ಮಾಹಿತಿ ಸಿಗಬೇಕಿದೆ.

ಇದಕ್ಕೂ ಮುನ್ನ ಜಮ್ಮು-ಕಾಶ್ಮೀರದ ಜಂಟಿ ಪೊಲೀಸ್ ಪಡೆ, 19 ರಾಷ್ಟ್ರೀಯ ರೈಫಲ್ಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಗೆ ಉಗ್ರರ ಇರುವಿಕೆ ಬಗ್ಗೆ ನಿಖರ ಮಾಹಿತಿ ಸಿಕ್ಕಿ ಪ್ರದೇಶವನ್ನು ಸುತ್ತುವರಿದರು. ಸ್ಥಳಕ್ಕೆ ಹೋಗುತ್ತಿದ್ದಂತೆ ಅವಿತು ಕುಳಿತಿದ್ದ ಉಗ್ರರು ಏಕಾಏಕಿ ದಾಳಿ ಮಾಡಲಾರಂಭಿಸಿದರು.

ಅನಂತ್ ನಾಗ್ ಜಿಲ್ಲೆಯ ಲಲ್ಲಾನ್ ಎಂಬಲ್ಲಿ ಕೂಡ ಇಂದು ನಸುಕಿನ ಜಾವ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಪೊಲೀಸರು ಹತ್ಯೆಗೈದಿದ್ದಾರೆ.

SCROLL FOR NEXT