ದೇಶ

5 ವರ್ಗದ ವಿದೇಶಿಯರಿಗೆ ಭಾರತಕ್ಕೆ ಬರಲು ಗೃಹ ಸಚಿವಾಲಯ ಅನುಮತಿ: ಯಾವುದು ಆ ಐದು ವರ್ಗ?

Sumana Upadhyaya

ನವದೆಹಲಿ: ಕೊರೋನಾ ವೈರಸ್ ಸೋಂಕಿನ ಸಮಸ್ಯೆಯಿಂದಾಗಿ ಸುಮಾರು ಮೂರು ತಿಂಗಳಿನಿಂದ ವಿದೇಶಿಯರು ಭಾರತಕ್ಕೆ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಿದ್ದ ನಂತರ ಇದೀಗ ಕೇಂದ್ರ ಸರ್ಕಾರ ಐದು ವರ್ಗದ ವಿದೇಶಿಯರು ಭಾರತಕ್ಕೆ ಪ್ರವೇಶಿಸಬಹುದು ಎಂದು ಅನುಮತಿ ಕೊಟ್ಟಿದೆ.

ವಿದೇಶದಲ್ಲಿರುವ ಅಪ್ರಾಪ್ತ ಮಕ್ಕಳ ಪೋಷಕರಲ್ಲಿ ಒಬ್ಬರು ಭಾರತೀಯ ನಾಗರಿಕ ಅಥವಾ ಸಾಗರೋತ್ತರ ಭಾರತೀಯನಾಗಿದ್ದರೆ, ಭಾರತದ ವ್ಯಕ್ತಿಯನ್ನು ಮದುವೆಯಾದ ವಿದೇಶಿಯರು, ಭಾರತದ ಪಾಸ್ ಪೋರ್ಟ್ ಹೊಂದಿರುವ ಅಥವಾ ಸಾಗರೋತ್ತರ ಭಾರತೀಯನಾಗಿರುವ ಅಪ್ರಾಪ್ತ ಮಕ್ಕಳ ವಿದೇಶಿ ಪೋಷಕರು ಸಿಂಗಲ್ ಪೇರೆಂಟ್ ಆಗಿದ್ದರೆ, ವಿದೇಶದ ವಿದ್ಯಾರ್ಥಿಯಾಗಿದ್ದು ಅವರ ಪೋಷಕರಲ್ಲಿ ಒಬ್ಬರಾದರೂ ಭಾರತೀಯನಾಗಿದ್ದರೆ ಅಥವಾ ಸಾಗರೋತ್ತರ ಭಾರತೀಯ ಕಾರ್ಡು ಹೊಂದಿದ್ದರೆ ಅಂತವರಿಗೆ ಭಾರತಕ್ಕೆ ಆಗಮಿಸಲು ಅವಕಾಶವಿದೆ.

ಕೇಂದ್ರ ಗೃಹ ಸಚಿವಾಲಯವು ಮತ್ತೊಂದು ವರ್ಗದ ವಿದೇಶಿ ಪ್ರಜೆಗಳಿಗೆ ಭಾರತಕ್ಕೆ ಭೇಟಿ ನೀಡಲು ಅನುಮತಿ ನೀಡಿದೆ, ಅದು ವಿದೇಶಿ ರಾಜತಾಂತ್ರಿಕರ ಅವಲಂಬಿತ ಕುಟುಂಬ ಸದಸ್ಯರು ಮತ್ತು ವಿದೇಶಿ ರಾಜತಾಂತ್ರಿಕ ಕಾರ್ಯಾಚರಣೆಗಳು, ಕಾನ್ಸುಲರ್ ಕಚೇರಿಗಳು ಅಥವಾ ಭಾರತದಲ್ಲಿ ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಸಂಸ್ಥೆಗಳ ಅಧಿಕೃತ ಸೇವಾ ಪಾಸ್‌ಪೋರ್ಟ್ ಹೊಂದಿರುವ ಸಿಬ್ಬಂದಿಗೆ.

ಗೃಹ ಸಚಿವಾಲಯದ ವಿದೇಶಾಂಗ ಇಲಾಖೆ ಈ ಆದೇಶವನ್ನು ಹೊರಡಿಸಿದ್ದು, ಭಾರತಕ್ಕೆ ಬರಲಿಚ್ಛಿಸುವ ಈ ಐದು ವಿಭಾಗಗಳಿಗೆ ಸೇರಿದವರು ಭಾರತೀಯ ರಾಯಭಾರಿ ಕಚೇರಿಯಿಂದ ಹೊಸ ವೀಸಾಗಳನ್ನು ಪಡೆದು ಬರಬೇಕು ಎಂದು ಹೇಳಿದೆ. ವಿದೇಶಿ ಭಾರತೀಯ ರಾಯಭಾರ ಕಚೇರಿ ನೀಡುವ ಸೂಕ್ತ ವರ್ಗದ ದೀರ್ಘಾವಧಿಯ ಬಹು ಪ್ರವೇಶ ವೀಸಾವನ್ನು ಹೊಂದಿರುವ ವಿದೇಶಿ ಪ್ರಜೆಗಳು ವೀಸಾವನ್ನು ಭಾರತೀಯ ರಾಜತಾಂತ್ರಿಕ ಕೇಂದ್ರಗಳಿಂದ ಮರು ಮೌಲ್ಯಮಾಪನ ಮಾಡಿಸಿಕೊಂಡು ಬರಬೇಕಾಗುತ್ತದೆ. ಅಂತಹ ವಿದೇಶಿ ಪ್ರಜೆಗಳು ಎಲೆಕ್ಟ್ರಾನಿಕ್ ವೀಸಾಗಳನ್ನು ಈಗಾಗಲೇ ಹೊಂದಿದ್ದರೆ ಅದರ ಮೂಲಕ ಬರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.

ಕಳೆದ ಮೇ 22 ರಂದು ಕೇಂದ್ರ ಸರ್ಕಾರ ಸಾಗರೋತ್ತರ ಭಾರತೀಯರಿಗೆ(ಒಸಿಐ) ಇದೇ ರೀತಿಯ ವಿನಾಯಿತಿ ನೀಡಿತ್ತು. ವಿದೇಶಗಳಲ್ಲಿ ಸಿಲುಕಿರುವ ನಾಲ್ಕು ವರ್ಗದ ಸಾಗರೋತ್ತರ ಭಾರತೀಯರಿಗೆ ಭಾರತಕ್ಕೆ ಬರಲು ಅನುಮತಿ ನೀಡಲಾಗಿತ್ತು.

ದೇಶದಲ್ಲಿ ಮೊದಲ ಹಂತದ ಲಾಕ್ ಡೌನ್ ಮಾರ್ಚ್ 25ರಂದು ಆರಂಭವಾದಾಗಲೇ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದುಗೊಳಿಸಿ ವಿದೇಶಗಳಿಂದ ನಾಗರಿಕರು ಭಾರತಕ್ಕೆ ಬರುವುದನ್ನು ನಿರ್ಬಂಧಿಸಲಾಗಿತ್ತು. ಇದೀಗ ಅನ್ ಲಾಕ್ ಮೂರನೇ ಹಂತದಲ್ಲಿ ಕೇಂದ್ರ ಸರ್ಕಾರ ವಿದೇಶಗಳಿಂದ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡುವುದರ ಬಗ್ಗೆ ಚಿಂತಿಸಲಿದೆ.

SCROLL FOR NEXT