ದೇಶ

ಲಡಾಖ್ ಸಂಘರ್ಷ: ಕನಿಷ್ಠ 20 ಭಾರತೀಯ ಯೋಧರು ಹುತಾತ್ಮ, ಚೀನಾದ 43 ಯೋಧರ ಹತ್ಯೆ

Lingaraj Badiger

ನವದೆಹಲಿ: ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಮಲ್ಲಯುದ್ಧದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಮಂಗಳವಾರ ಭಾರತೀಯ ಸೇನೆ ಅಧಿಕೃತವಾಗಿ ತಿಳಿಸಿದೆ.

ಸೋಮವಾರ ತಡರಾತ್ರಿ ಲಡಾಖ್ ನಲ್ಲಿ ನಡೆದ ಸಂಘರ್ಷದಲ್ಲಿ ಮೂವರು ಯೋಧರು ಹುತಾತ್ಮರಾಗಿ, 17 ಸೈನಿಕರು ಗಂಭೀರ ಗಾಯಗೊಂಡಿದ್ದರು. ಆದರೆ, ಎತ್ತರದ ಪ್ರದೇಶ ಹಾಗೂ ಶೂನ್ಯಕ್ಕಿಂತಲೂ ಕಡಿಮೆ ಉಷ್ಣಾಂಶವಿರುವ ಪ್ರದೇಶವಿದ್ದರಿಂದ ಗಾಯಗೊಂಡ ಸೈನಿಕರು ಹುತಾತ್ಮರಾಗಿದ್ದಾರೆ. ಈ ಮೂಲಕ 20 ಭಾರತೀಯ ಯೋಧರು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

ಈ ಮಧ್ಯೆ, ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ 43 ಸೈನಿಕರು ಹತರಾಗಿದ್ದಾರೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

ಇದಕ್ಕು ಮುನ್ನ ಉಭಯ ದೇಶದ ಯೋಧರ ನಡುವಿನ ಸಂಘರ್ಷದಲ್ಲಿ ಭಾರತೀಯ ಸೇನೆಯ ಕರ್ನಲ್ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿತ್ತು. ಇದೇ ವೇಳೆ ಚೀನಾದ ಕಡೆಯೂ ಸಾವು ನೋವು ಸಂಭವಿಸಿದ್ದು, 100ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಹಿರಿಯ ವರದಿಗಾರ್ತಿ ವಾಂಗ್ ವೆನ್ವೆನ್ ಎಂಬುವರು ಟ್ವೀಟ್ ಮಾಡಿ ಕಳೆದ ರಾತ್ರಿ ಭಾರತ ಮತ್ತು ಚೀನಾ ಯೋಧರ ನಡುವಿನ ಸಂಘರ್ಷದಲ್ಲಿ ಐವರು ಚೀನಾದ ಸೈನಿಕರು ಹತ್ಯೆಯಾಗಿದ್ದು 11 ಜನ ಗಾಯಗೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

SCROLL FOR NEXT