ದೇಶ

ವ್ಯಾಪಕ ಕೊರೋನಾ: ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಇಂದು ಮತ್ತು ನಾಳೆ ಪ್ರಧಾನಿ ಮೋದಿ ವಿಡಿಯೊ ಸಂವಾದ

Sumana Upadhyaya

ನವದೆಹಲಿ: ಕಳೆದ 15 ದಿನಗಳಿಂದ ದೇಶಾದ್ಯಂತ ಕೊರೋನಾ ಸೋಂಕಿತ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿರುವುದರಿಂದ ಆತಂಕಕ್ಕೀಡಾಗಿರುವ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತು ನಾಳೆ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ನಡೆಸಲಿದ್ದಾರೆ.

21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರ ಜೊತೆ ಇಂದು ಅಪರಾಹ್ನ ಮೂರು ಗಂಟೆಗೆ ಸಭೆ ನಡೆಸಲಿದ್ದು, ಕೊರೋನಾ ಬಿಕ್ಕಟ್ಟು ಎದುರಾದ ನಂತರ ಪ್ರಧಾನಿಗಳು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸುತ್ತಿರುವ ಏಳನೇ ಸಭೆ ಇದಾಗಿದೆ. ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಾಳೆ ಪ್ರಧಾನಿ ಜೊತೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಕೊರೋನಾ ಪರೀಕ್ಷೆ ಮತ್ತು ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಕುರಿತು ಇಂದು ಮತ್ತು ನಾಳೆ ಮುಖ್ಯಮಂತ್ರಿಗಳ ಜೊತೆ ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕೇಂದ್ರ ಆರೋಗ್ಯ ಸಚಿವಾಲಯ ಅಂಕಿಅಂಶ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 11,502 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು ಇಲ್ಲಿಯವರೆಗೆ ಸೋಂಕಿತರ ಒಟ್ಟು ಸಂಖ್ಯೆ 3 ಲಕ್ಷದ 32 ಸಾವಿರವಾಗಿದೆ. 9 ಸಾವಿರದ 520 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯಗಳಲ್ಲಿ ಹೊಟೇಲ್, ರೆಸ್ಟೋರೆಂಟ್, ಮಾಲ್, ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಕಳೆದ ವಾರ ಅನುಮತಿ ನೀಡಿದ ನಂತರ ಕೊರೋನಾ ಸೋಂಕಿತರ ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿದೆ.

SCROLL FOR NEXT