ದೇಶ

ಲಡಾಖ್ ಗಡಿ ಸಂಘರ್ಷ: ಚೀನಾ ದಾಳಿಯಲ್ಲಿ ಗಾಯಗೊಂಡಿದ್ದ ನಾಲ್ವರು ಭಾರತೀಯ ಯೋಧರ ಸ್ಥಿತಿ ಗಂಭೀರ

Manjula VN

ನವದೆಹಲಿ: ಪೂರ್ವ ಲಡಾಖ್'ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಮಂಗಳವಾರ ಭಾರತ ಹಾಗೂ ಚೀನಾ ಉಭಯ ಸೇನೆಗಳ ನಡುವೆ ನಡೆದ ಸಂಘರ್ಷದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಲವು ಯೋಧರ ಪೈಕಿ ನಾಲ್ವರು ಭಾರತೀಯ ಯೋಧರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಗಲ್ವಾನ್ ಕಣಿವೆ ಪ್ರದೇಶದಲ್ಲಿ ಉಭಯ ಸೇನೆಗಳ ನಡುವೆ 5 ವಾರಗಳಿಂದ ಸೃಷ್ಟಿಯಾಗಿದ್ದ ಗಡಿ ಸಂಘರ್ಷ, ಸೋಮವಾರ ರಾತ್ರಿ 50 ವರ್ಷಗಳಲ್ಲಿಯೇ ಭೀಕರ ಕಾಳಗಕ್ಕೆ ಕಾರಣವಾಗಿದೆ. ವಿವಾದಿತ ಪ್ರದೇಶದಿಂದ ಹಿಂದೆ ಸರಿಯುವಾಗ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ಕಲ್ಲು, ದೊಣ್ಣೆಗಳಿಂದ ತೀವ್ರ ದಾಳಿ ನಡೆಸಿದ್ದು, ಈ ದಾಳಿ ವಿರುದ್ಧ ಭಾರತೀಯ ಯೋಧರೂ ಕೂಡ ತಿರುಗಿ ಬಿದ್ದಿದ್ದಾರೆ. 

ರಾತ್ರಿ ಹಲವು ಗಂಟೆಗಳ ಕಾಡ ನಡೆದ ಈ ಹೊಡೆದಾಟ, ಬಡಿದಾಟಗಳಿಂದ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಸಂಘರ್ಷದಲ್ಲಿ ಹಲವು ಯೋಧರೂ ಕೂಡ ಗಾಯಗೊಂಡಿದ್ದು, ಇದರಲ್ಲಿ ನಾಲ್ವರು ಯೋಧರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. 

ಪೂರ್ವ ಲಡಾಖ್'ನ ಗಲ್ವಾನ್ ಗಡಿಯಲ್ಲಿ ಕಳೆದ 5 ವಾರಗಳಿಂದ ಬಿಕ್ಕಟ್ಟು ಏರ್ಪಟ್ಟಿದೆ. ಈ ಕುರಿತು ಎರಡೂ ದೇಶಗಳ ನಡುವೆ ಮಾತುಕತೆ ನಡೆದಿದ್ದು, ಸ್ಥಳದಿಂದ ಹಿಂದೆ ಸರಿಯುವ ಕುರಿತು ಒಮ್ಮತಕ್ಕೆ ಬರಲಾಗಿತ್ತು. ಅದರಂತೆ ಚೀನಾ ಯೋಧರು ಸೋಮವಾರ ರಾತ್ರಿ ಕಾಲ್ತೆಗೆಯಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಭಾರತೀಯ ಯೋಧರ ಮೇಲೆ ದೊಣ್ಣೆ ಹಾಗೂ ಕಲ್ಲುಗಳಿಂದ ದಾಳಿ ನಡೆಸಿದ್ದರು. ಕೂಡಲೇ ಭಾರತೀಯ ಯೋಧರು ಪ್ರತಿದಾಳಿಗೆ ಇಳಿದರು. ಹಲವು ತಾಸುಗಳ ಕಾಲ ಯೋಧರ ನಡುವೆ ಘರ್ಷಣೆ ನಡೆಯಿತು. ಮಧ್ಯರಾತ್ರಿ ಬಳಿಕ ಕಲಹ ನಿಂತಿತ್ತು. ಈ ಘರ್ಷಣೆಯಲ್ಲಿ ಭಾರತದ ಕರ್ನಲ್ ಸೇರಿ 20 ಮಂದಿ ಸಾವನ್ನಪ್ಪಿದ್ದಾರೆ. 

SCROLL FOR NEXT