ದೇಶ

ಲಡಾಖ್ ಸಂಘರ್ಷ: 17 ದಿನದ ಹಿಂದೆ ಹುಟ್ಟಿದ ತನ್ನ ಮಗುವಿನ ಮುಖವನ್ನೂ ನೋಡದೆ ಯೋಧ ಕೆಕೆ ಓಝಾ ಹುತಾತ್ಮ!

Manjula VN

ನವದೆಹಲಿ: ಲಡಾಖ್ ನಲ್ಲಿ ಚೀನಾ ಹಾಗೂ ಭಾರತದ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, ಘಟನೆಗೆ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಇನ್ನು ಹುತಾತ್ಮ ಯೋಧರ ಕುಟುಂಬದ ಪರಿಸ್ಥಿತಿಯಂತೂ ಹೇಳತೀರದಾಗಿದೆ. 

ಪತಿ ದೇಶ ಕಾಯುವ ಸೇವೆಯಲ್ಲಿದ್ದಾನೆಂಬ ಹೆಮ್ಮೆ, ಮಗ ಗಡಿಕಾಯುವ ಯೋಧ ಅನ್ನೋ ಕುಟುಂಬದ ಸಂತಸ ಒಂದೇ ಕ್ಷಣಕ್ಕೆ ಮಾಯವಾಗಿ ಹೋಗಿದೆ. ತನ್ನ ಮಗ, ತನ್ನ ಪತಿ ಬಾರದ ಲೋಕಕ್ಕೆ ತೆರಳಿದ್ದಾರೆಂಬ ಸತ್ಯ ಹುತಾತ್ಮ ಯೋಧರ ಕುಟುಂಬಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 

20 ವೀರ ಯೋಧರ ಮರಣ ಯೋಧರ ಕುಟುಂಬದ ಕಣ್ಣುಗಳನ್ನೇ ಕಿತ್ತುಕೊಂಡಿದೆ. ಪ್ರತೀಯೊಬ್ಬ ಹುತಾತ್ಮ ಯೋಧರ ಕುಟುಂಬದ ಕಣ್ಣೀರು ಮನಕಲುಕುವಂತಿದೆ. ಲಡಾಖ್ ನಲ್ಲಿ ನಿನ್ನೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಬಲಿಯಾಗಿದ್ದು, ಇದರಲ್ಲಿ ಜಾರ್ಖಂಡ್'ನ ಸಾಹಿಬ್ ಗಂಜ್'ನ ಸಿಪಾಯ್ ಕುಂದನ್ ಕುಮಾರ್ ಓಝಾ ಕೂಡ ಒಬ್ಬರಾಗಿದ್ದಾರೆ. 

ಓಝಾ ಅವರು 17 ದಿನಗಳ ಹಿಂದೆ ಹುಟ್ಟಿದ್ದ ಹೆಣ್ಣು ಮಗುವನ್ನು ಬಿಟ್ಟು ಹೋಗಿದ್ದಾರೆ. ರೈತರಾಗಿರುವ ರವಿ ಶಂಕರ್ ಓಝಾ ಅವರ ಎರಡನೇ ಪುತ್ರ ಇವರಾಗಿದ್ದು, 2011 ರಲ್ಲಿ ಕುಂದನ್ ಕುಮಾರ್ ಓಝಾ ಅವರು ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. ಓಝಾ ಅವರಿಗೆ ಮುಖೇಶ್ ಕುಮಾರ್ ಓಝಾ ಹಾಗೂ ಕನ್ಹಯ್ಯ ಕುಮಾರ್ ಓಝಾ ಎಂಬ ಇಬ್ಬರು ಸಹೋದರರಿದ್ದು, ಇಬ್ಬರೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. 

5 ತಿಂಗಳ ಹಿಂದೆ ರಜೆ ನಿಮಿತ್ತ ಕೆಕೆ ಓಝಾ ಅವರು ಮನೆಗೆ ಬಂದಿದ್ದರು. ಕರ್ತವ್ಯದಲ್ಲಿರುವ ಸಂದರ್ಭದಲ್ಲಿ 15 ದಿನಗಳಿಗೊಮ್ಮೆ ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿದ್ದರು. ನೇಹಾ ದೇವಿಯವೊಂದಿಗೆ ವಿವಾಹವಾಗಿದ್ದ ಓಝಾ ಅವರಿಗೆ 17 ದಿನಗಳ ಹಿಂದಷ್ಟೇ ಹೆಣ್ಣು ಮಗು ಜನಿಸಿತ್ತು. ಆದರೆ, ಮಗುವಿನ ಮುಖ ನೋಡುವುದಕ್ಕೂ ಮುನ್ನವೇ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮರಾಗಿದ್ದಾರೆ. 

SCROLL FOR NEXT