ದೇಶ

ಆಮದು ಕಡಿಮೆ ಮಾಡಿ ಸ್ವಾವಲಂಬಿಯಾಗೋಣ, ಕೋವಿಡ್-19 ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸೋಣ: ಪ್ರಧಾನಿ ಮೋದಿ

Manjula VN

ನವದೆಹಲಿ: ವಿದೇಶಿ ವಸ್ತುಗಳ ಆಮದು ನಿಲ್ಲಿಸಿ, ಸ್ವಾವಲಂಬಿಯಾಗುವ ಮೂಲಕ ಕೊರೋನಾ ವೈರಸ್ ಬಿಕ್ಕಟನ್ನು ಭಾರತ ಅವಕಾಶವನ್ನಾಗಿ ಪರಿವರ್ತಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ. 

ದೇಶದ 41 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಉದ್ಘಾಟಿಸಿದ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಕೊರೋನಾ ಬಿಕ್ಕಟ್ಟನ್ನೇ ಭಾರತ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲಿದೆ. ಕೊರೋನಾ ಬಿಕ್ಕಟ್ಟು ಸ್ವಾವಲಂಬಿಯಾಗಿರಬೇಕೆಂಬ ಪಾಠವನ್ನು ಕಲಿಸಿದೆ. ಆಮದು ವಸ್ತುಗಳ ಮೇಲೆ ಅವಲಂಬಿತವಾಗಿರುವುದನ್ನು ಭಾರತ ಕಡಿಮೆ ಮಾಡಲಿದೆ ಎಂದು ಹೇಳಿದ್ದಾರೆ. 

"ಎಲ್ಲಾ ಸೂಚಕಗಳು ಭಾರತೀಯ ಆರ್ಥಿಕತೆ ಚೇತರಿಸಿಕೊಂಡು ತ್ವರಿತವಾಗಿ ಪುಟಿದೇಳಲಿದೆ ಮತ್ತು ಮುಂದುವರಿಯಲಿದೆ ಎಂಬುದನ್ನು ಸೂಚಿಸುತ್ತಿವೆ. ಬಳಕೆ ಮತ್ತು ಬೇಡಿಕೆಗಳು ತ್ವರಿತವಾಗಿ ಪೂರ್ವ ಕೋವಿಡ್ ಪರಿಸ್ಥಿತಿಗೆ ತಲುಪುತ್ತಿವೆ. ಇಂತಹ ಸನ್ನಿವೇಶದಲ್ಲಿ, ಹೊಸ ಆರಂಭಕ್ಕೆ ಇದಕ್ಕಿಂತ ಉತ್ತಮ ಸಮಯವಿರಲಾರದು" ಎಂದಿದ್ದಾರೆ. 

ವಿದ್ಯುತ್, ಉಕ್ಕು, ಅಲ್ಯುಮಿನಿಯಂ ಮತ್ತು ಸ್ಪಾಂಜ್ ಉಕ್ಕು ಸೇರಿದಂತೆ ವಿವಿಧ ಮೂಲ ಕೈಗಾರಿಗಳ ಒಳಹರಿವಿಗೆ ಮುಖ್ಯ ಮೂಲವಾಗಿರುವ ಗಣಿಗಾರಿಕೆ ವಲಯದಲ್ಲಿ ದೇಶ 'ಆತ್ಮನಿರ್ಭರ್' (ಸ್ವಾವಲಂಬನೆ) ಸಾಧಿಸುವ ದೃಷ್ಟಿಕೋನವನ್ನು ಬಿಡಿಸಿಟ್ಟ ಮೋದಿ, ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ ಹರಾಜು ಪ್ರತಿಕ್ರಿಯೆ ಪ್ರತಿ ಪಾಲುದಾರರಿಗೆ ಗೆಲುವಿನ ಸನ್ನಿವೇಶವಾಗಿದೆ. "ನಾವು ಕೇವಲ ಕಲ್ಲಿದ್ದಲು ಗಣಿಗಾರಿಕೆಯ ಹರಾಜು ಮಾತ್ರವಲ್ಲ, ಈ ಮೂಲಕ ನಾವು ಕಲ್ಲಿದ್ದಲು ವಲಯವನ್ನು ದಶಕಗಳ ಲಾಕ್ ಡೌನ್ ನಿಂದ ಹೊರಗೆಳೆಯುತ್ತಿದ್ದೇವೆ" ಎಂದರು. 

ಈ ಸುಧಾರಣೆಯಿಂದ, ಕಲ್ಲಿದ್ದಲು ಉತ್ಪಾದನೆ ಮತ್ತು ಸಂಪೂರ್ಣ ಕಲ್ಲಿದ್ದಲು ವಲಯ ಸ್ವಾವಲಂಬಿಯಾಗಲಿದೆ. ಸದೃಢ ಗಣಿಗಾರಿಕೆ ಮತ್ತು ಖನಿಜ ವಲಯಗಳಿಲ್ಲದೆ ಸ್ವಾವಲಂಬನೆ ಸಾಧ್ಯವಿಲ್ಲ. ಏಕೆಂದರೆ ಖನಿಜಗಳು ಮತ್ತು ಗಣಿಗಾರಿಕೆ ಆರ್ಥಿಕತೆಯ ಪ್ರಮುಖ ಸ್ತಂಭವಾಗಿವೆ. ಈ ಸುಧಾರಣೆಯ ನಂತರ ಹೊಸ ಕಲ್ಲಿದ್ದಲು ಉತ್ಪಾದನೆ, ಸಂಪೂರ್ಣ ಕಲ್ಲಿದ್ದಲು ವಲಯ ಸ್ವಾವಲಂಬಿಯಾಗಲಿದೆ ಎಂದರು. 

ಭಾರತ ಕಲ್ಲಿದ್ದಲು ಸಂಗ್ರಹದಲ್ಲಿ ನಾಲ್ಕನೇ ಸ್ಥಾನದಲ್ಲಿದೆ, ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ, ದೇಶದ ಎರಡನೇ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. ರಫ್ತು ವಲಯದಲ್ಲಿ ಹೆಚ್ಚಿನ ಸಾಧನೆ ಮಾಡಿಲ್ಲ ಎಂದು ಹೇಳಿದರು. 

ಸರ್ಕಾರದ ಈ ಹೊಸ ನಿರ್ಧಾರ ಮುಂದಿ 5-7 ವರ್ಷಗಳಲ್ಲಿ ದೇಶದಲ್ಲಿ ಸುಮಾರು 33 ಸಾವಿರ ಕೋಟಿ ರೂ. ಹೂಡಿಕೆಯನ್ನು ನಿರೀಕ್ಷಿಸುತ್ತಿದೆ ಎಂದರು. ಈ ಗಣಿಗಳು ದೇಶದ ಆರ್ಥಿಕತೆಗೆ ಒಟ್ಟು 20 ಸಾವಿರ ಕೋಟಿ ರೂ. ಆದಾಯ ನೀಡುತ್ತಿವೆ.

SCROLL FOR NEXT