ದೇಶ

ನವದೆಹಲಿ: ಕೋವಿಡ್-19 ಸೋಂಕಿತ ಆರೋಗ್ಯ ಸಚಿವರಿಗೆ ಫ್ಲಾಸ್ಮಾ ಥೆರಪಿ ಚಿಕಿತ್ಸೆ 

Nagaraja AB

ನವದೆಹಲಿ: ಕೋವಿಡ್-19 ಸೋಂಕಿಗೆ ತುತ್ತಾಗಿರುವ ರಾಷ್ಟ್ರ ರಾಜಧಾನಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರನ್ನು ಸಾಕೇತ್ ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿ, ಅಲ್ಲಿ ಅವರಿಗೆ ಫ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.

ನ್ಯೂಮೊನಿಯಾದಿಂದ ಸದ್ಯ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸತ್ಯೇಂದರ್ ಜೈನ್ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿರುವುದರಿಂದ ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ. 

55 ವರ್ಷದ ಸತ್ಯೇಂದರ್ ಜೈನ್ ಅವರನ್ನು ಪೂರ್ಣಕಾಲ ಆಕ್ಸಿಜನ್ ಬೆಂಬಲದಲ್ಲಿ ಇರಿಸಲಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಅಕ್ಸಿಜನ್ ಶುದ್ಧತ್ವ ಮಟ್ಟ ಸಾಮಾನ್ಯವಾಗಿ 95 ಇರಬೇಕಾಗುತ್ತದೆ. ಆದರೆ, ಸತ್ಯೇಂದರ್ ಜೈನ್ ಅವರಿಗೆ 89ಕ್ಕೆ ಇಳಿದಿರುವುದರಿಂದ ಪೂರ್ಣ ಕಾಲ ಆಕ್ಸಿಜನ್ ಬೆಂಬಲದಲ್ಲಿಯೇ ಇರಿಸಲಾಗಿದೆ. ಅವರಿಗೆ ನ್ಯೂಮೋನಿಯಾ ಇದ್ದು, ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಸತ್ಯೇಂದರ್ ಜೈನ್ ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸದಿದ್ದಲ್ಲಿ ದೊಡ್ಡ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವ ಬಗ್ಗೆ ಯೋಚನೆ ಮಾಡುತ್ತಿರುವುದಾಗಿ ಎಂದು ಅವರು ಹೇಳಿದ್ದಾರೆ.

ಸತ್ಯೇಂದರ್ ಜೈನ್ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿತ್ತು. ಮಾರನೇ ದಿನ ಅವರಿಗೆ ತೀವ್ರವಾದ ಜ್ವರ ಹಾಗೂ ಉಸಿರಾಟದಲ್ಲಿ ತೊಂದರೆ ಉಂಟಾಗಿದ್ದು, ರಾಜೀವ್ ಗಾಂಧಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಕೊರೋನಾ ಪರಿಸ್ಥಿತಿ ಕುರಿತ ಉನ್ನತ ಅಧಿಕಾರಿಗಳ ಸಭೆಯಲ್ಲೂ ಸತ್ಯೇಂದರ್ ಜೈನ್ ಪಾಲ್ಗೊಂಡಿದ್ದರು.  

SCROLL FOR NEXT