ದೇಶ

ಅತ್ತ ಯೋಧರು ಹೋರಾಡುತ್ತಿದ್ದರೆ ಇಲ್ಲೊಬ್ಬ ನಾಯಕ ತಮ್ಮ ಟ್ವೀಟ್ ಮೂಲಕ ಅಲ್ಪಜ್ಞಾನ ಪ್ರದರ್ಶಿಸುತ್ತಿದ್ದಾರೆ: ಜೆ.ಪಿ.ನಡ್ಡಾ

Sumana Upadhyaya

ನವದೆಹಲಿ: ಪೂರ್ವ ಲಡಾಕ್ ನ ಭಾರತ-ಚೀನಾ ಗಡಿಭಾಗದಲ್ಲಿ ನಮ್ಮ ಸೈನಿಕರು ಗಡಿಯನ್ನು ರಕ್ಷಿಸುತ್ತಿರುವ ಸಮಯದಲ್ಲಿ ಇಲ್ಲಿ ಒಬ್ಬರು ನಾಯಕರು ತಮ್ಮ ಟ್ವೀಟ್ ಗಳ ಮೂಲಕ ಸೈನಿಕ ಪಡೆಯ ಸ್ಥೈರ್ಯಗಳಿಗೆ ಹಾನಿ ಮಾಡಿ ತಮ್ಮ ಅಲ್ಪ ಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗಲ್ವಾನದಲ್ಲಿ ನಮ್ಮ ಯೋಧರು ಹೋರಾಡುತ್ತಿರುವಾಗ ಒಬ್ಬ ನಾಯಕರು ತಮ್ಮ ಟ್ವೀಟ್ ಗಳ ಮೂಲಕ ಸೈನಿಕ ಪಡೆಯ ಸ್ಥೈರ್ಯವನ್ನು ಕುಗ್ಗಿಸುತ್ತಿದ್ದಾರೆ. ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ದೇಶದ ಪ್ರಧಾನಿಗೆ ತೋರಿಸಬೇಕಾದ ಕನಿಷ್ಠ ಗೌರವವನ್ನೂ ತೋರಿಸುತ್ತಿಲ್ಲ, ತಮ್ಮ ಅಲ್ಪಜ್ಞಾನವನ್ನು ದೇಶದ ಮುಂದೆ ಪ್ರದರ್ಶಿಸುತ್ತಿದ್ದೀರಿ ಎಂದು ಆರೋಪಿಸಿದರು.

ದೆಹಲಿಯಲ್ಲಿಂದು ವರ್ಚುವಲ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಯೋಧರನ್ನು ಸಶ್ತ್ರಾಸ್ತ್ರಗಳಿಲ್ಲದೆ ಕಳುಹಿಸಿದ್ದೇಕೆ ಎಂದು ಪ್ರಶ್ನಿಸುತ್ತಿದ್ದಾರೆ, ಅವರಿಗೆ ಅಂತಾರಾಷ್ಟ್ರೀಯ ಒಪ್ಪಂದಗಳ ಬಗ್ಗೆ ಅರಿವಿಲ್ಲವೇ?ಅಷ್ಟಕ್ಕೂ ಯೋಧರು ಸಶ್ತ್ರಾಸ್ತ್ರಗಳಿಲ್ಲದೆ ಹೋಗಿರಲಿಲ್ಲ. ನಿಮ್ಮ ಸೀಮಿತ ಬುದ್ದಿಯನ್ನು ಏಕೆ ಜನರಿಗೆ ತೋರಿಸುತ್ತಿದ್ದೀರಿ ಎಂದು ಕೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕೂಡ ಹರಿಹಾಯ್ದ ನಡ್ಡಾ, ರಾಹುಲ್ ಗಾಂಧಿಯವರು ಬಳಸುವ ಭಾಷೆ ಭಾರತೀಯ ಕುಟುಂಬದ ಸಂಸ್ಕಾರವನ್ನು ತೋರಿಸುವುದಿಲ್ಲ, ತನ್ನ ತಾಯಿಯಿಂದ ಬಂದ ಮೂಲವನ್ನು ಅದು ತೋರಿಸುತ್ತದೆ ಎಂದು ಕುಟುಕಿದರು.

SCROLL FOR NEXT