ದೇಶ

11 ಗಂಟೆಗಳ ಕಾಲ ನಡೆದ ಭಾರತ-ಚೀನಾ ಲೆಫ್ಟಿನೆಂಟ್ ಜನರಲ್ ಗಳ ಮಾತುಕತೆ!

Srinivas Rao BV

ಲಡಾಖ್: ಭಾರತೀಯ ಸೇನೆಯ 14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಹಾಗೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ 11 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಬೆಳಿಗ್ಗೆ 11.30 ಕ್ಕೆ ಪ್ರಾರಂಭವಾದ ಮಾತುಕತೆ 11 ಗಂಟೆಗಳ ಕಾಲ ಮುಂದುವರೆದಿದ್ದು, ಈ ಬಗ್ಗೆ ಹೆಚ್ಚಿನ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಚೀನಾದ ಭಾಗದಲ್ಲಿರುವ ಎಲ್ಎಸಿಯಲ್ಲಿ ಸಭೆ ನಡೆದಿದ್ದು, ಈಶಾನ್ಯ ಲಡಾಖ್ ನಲ್ಲಿ ಉಂಟಾಗಿದ್ದ ಘರ್ಷಣೆಯಿಂದ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ಶಾಂತಗೊಳಿಸುವ ಬಗ್ಗೆ ಚರ್ಚಿಸಲಾಗಿದೆ. ಇದು ಉಭಯ ದೇಶಗಳ ಕಾರ್ಪ್ಸ್ ಕಮಾಂಡರ್ ಗಳ ನಡುವೆ ನಡೆದ ಎರಡನೇ ಸಭೆಯಾಗಿದೆ.

ಜೂ.6 ರಂದು ನಡೆದಿದ್ದ ಸಭೆಯಲ್ಲಿ ಈಶಾನ್ಯ ಲಡಾಖ್ ನ ಹಲವು ಪ್ರದೇಶಗಳಲ್ಲಿ ಉಭಯ ದೇಶಗಳೂ ಸೇನಾಪಡೆಯನ್ನು ಹಿಂಪಡೆಯಲು ನಿರ್ಧರಿಸಲಾಗಿತ್ತು. ಅಷ್ಟೇ ಅಲ್ಲದೇ ಎಲ್ಎಸಿ ಭಾಗದಲ್ಲಿ ಮೇ.4 ಕ್ಕಿಂತ ಮುಂಚಿನ ಪರಿಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಚೀನಾಗೆ ಭಾರತ ಕೇಳಿತ್ತು. ಭಾರತದ ಈ ಪ್ರಸ್ತಾವನೆಗೆ ಚೀನಾ ಯಾವ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಜೊತೆಗೆ 10,000 ಸೇನಾ ಪಡೆಗಳನ್ನು ಸ್ಥಾಪಿಸಿರುವ ಪ್ರದೇಶದಿಂದ ತನ್ನ ಸಿಬ್ಬಂದಿಗಳನ್ನು ಹಿಂಪಡೆಯುವ ಆಸಕ್ತಿಯನ್ನೂ ತೋರಿರಲಿಲ್ಲ.

ಸೇನಾಪಡೆಗಳನ್ನು ಈಶಾನ್ಯ ಲಡಾಖ್ ನಿಂದ ಹಾಗೂ ಇತರ ಪ್ರದೇಶಗಳಿಂದ ಹಿಂಪಡೆಯುವ ಜೂ.6 ರ ಸಭೆಯ ನಿರ್ಣಯವನ್ನು ಗೌರವಿಸಿ ಬದ್ಧವಾಗಿರುವಂತೆ ಭಾರತ ಈ ಸಭೆಯಲ್ಲಿ ಚೀನಾಗೆ ಹೇಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಲಡಾಖ್ ಗೆ ಹತ್ತಿರದಲ್ಲಿರುವ ಭಾರತೀಯ ಪ್ರದೇಶದಲ್ಲಿ ಪಿಎಲ್ಎ ಮಾಡಿರುವ ನಿರ್ಮಾಣ ಕಾಮಗಾರಿಗಳ ಬಗ್ಗೆಯೂ ಜೂ.೨೨ರ ಸಭೆಯಲ್ಲಿ ಚರ್ಚೆಗೆ ಬಂದಿರುವ ಸಾಧ್ಯತೆ ಇದೆ.

SCROLL FOR NEXT