ದೇಶ

ತಮಿಳುನಾಡು: ಲಾಕ್ಡೌನ್ ನಿಯಮ ಉಲ್ಲಂಘನೆ; ಪೊಲೀಸ್ ಕಸ್ಟಡಿಯಲ್ಲಿ ತಂದೆ, ಮಗ ಸಾವು

Manjula VN

ತೂತುಕುಡಿ: ಲಾಕ್'ಡೌನ್ ನಿಯಮ ಉಲ್ಲಂಘಿನೆ ಮಾಡಿದ ಆರೋಪದ ಮೇಲೆ ಪೊಲೀಸ್ ಕಸ್ಟಡಿಯಲ್ಲಿದ್ದ ತಂದೆ ಹಾಗೂ ಪುತ್ರನೊಬ್ಬ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. 

ಜೆ ಫೆನಿಕ್ಸ್ (31) ಹಾಗೂ ಪಿ.ಜಯರಾಜ್ (63) ಮೃತ ವ್ಯಕ್ತಿಗಳೆಂದು ಹೇಳಲಾಗುತ್ತಿದೆ. ಜಯರಾಜ್ ಅವರು ಮರದ ವ್ಯಾಪಾರಿಯಾಗಿದ್ದು, ಜೂನ್.19ರಂದು ರಾತ್ರಿ 9 ಗಂಟೆಯ ನಂತರವೂ ಅಂಗಡಿ ತೆರೆದಿದ್ದ ಕಾರಣ ಪೊಲೀಸರು ಜಯರಾಜ್ ಅವರನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿರಿಸಿಕೊಂಡಿದ್ದರು. 

ಜಯರಾಜ್ ಅವರ ಪುತ್ರ ಫೆನಿಕ್ಸ್ ಮೊಬೈಲ್ ಅಂಗಡಿ ನಡೆಸುತ್ತಿದ್ದು, ತಂದೆಯನ್ನು ಪೊಲೀಸರು ಕರೆದೊಯ್ದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವಂತೆ ಪೊಲೀಸ್ ಠಾಣೆಗೆ ತೆರಳಿದ್ದರು. ಮಾತಿನ ಚಕಮಕಿ ಬಳಿಕ ಪೊಲೀಸರು ಫೆನಿಕ್ಸ್ ನನ್ನೂ ಕೂಡ ವಶಕ್ಕೆ ಪಡೆದು, ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿದೆ 188, 269, 294, 353 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. 

ತಂದೆಯನ್ನು ಬಿಡುಗಡೆ ಮಾಡುವಂತೆ ಠಾಣೆ ಎದುರು ಪ್ರತಿಭಟಿಸಿದ ಕಾರಣ ಫೆನಿಕ್ಸ್'ಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದರು. ಅಲ್ಲದೆ ವಶಕ್ಕೆ ಪಡೆದುಕೊಂಡಿದ್ದ ಜಯರಾಜ್ ಅವರಿಗೂ ಹಿಗ್ಗಾಮುಗ್ಗಾ ಥಳಿಸಿದ್ದರು ಎಂದು ಸ್ಥಳೀಯರು ಹಾಗೂ ಸಂಬಂಧಿಕರು ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ. 

ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ಈ ಇಬ್ಬರ ಸಾವು ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಪೊಲೀಸರ ವರ್ತನೆ ವಿರುದ್ಧ ಕಿಡಿಕಾರಲು ಆರಂಭಿಸಿದ್ದಾರೆ. ಅಲ್ಲದೆ, ಪೊಲೀಸರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. 

ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಸಲುವಾಗಿ ತೂತುಕುಡಿ ಎಸ್'ಪಿ ಅರುಣ್ ಅವರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಅಲ್ಲದೆ, ಘಟನೆಯಲ್ಲಿ ದುರ್ವರ್ತನೆ ತೋರಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹಾಗೂ ಮೃತ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. 

SCROLL FOR NEXT