ದೇಶ

ಪತಂಜಲಿ ಯೋಗ ಪೀಠದಿಂದ ಕೊರೋನಾ ವೈರಸ್ ಚಿಕಿತ್ಸೆಯ ಆಯುರ್ವೇದ ಔಷಧಿ ಬಿಡುಗಡೆ

Srinivasamurthy VN

ನವದೆಹಲಿ: ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಯೋಗ ಗುರು ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಯೋಗ ಪೀಠ ಇಂದು ಔಷಧಿ ಬಿಡುಗಡೆ ಮಾಡಿದೆ.

ಕೊರೋನಾ ವೈರಸ್ ಚಿಕಿತ್ಸೆಗೆ ಇಂದು ಬಾಬಾ ರಾಮದೇವ್ ಅವರ ಪತಂಜಲಿ ಯೋಗಪೀಠ ಇಂದು ಔಷಧಿ ಬಿಡುಗಡೆಗೊಳಿಸಿದೆ. ಪತಂಜಲಿ ಬಿಡುಗಡೆಗೊಳಸಿರುವ ಔಷಧಿಗೆ ಕೊರೋನಿಲ್ ಎಂಬ ಹೆಸರು ನೀಡಲಾಗಿದ್ದು, ಕೊರೋನಾ ವೈರಸ್ ಚಿಕಿತ್ಸೆಗೆ ಇದು ಪ್ರಭಾವಶಾಲಿಯಾಗಿದೆ ಎಂದು ಸಂಸ್ಥೆ ಹೇಳಿದೆ.

ಈ ಕುರಿತಂತೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗ ಗುರು ಬಾಬಾ ರಾಮ್ ದೇವ್ ಅವರು, ಪತಂಜಲಿ ರಿಸರ್ಚ್ ಇನ್ಸ್ಟಿಟ್ಯೂಟ್ (PRI) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (NIMS), ಜೈಪುರ್ ಸಂಶೋಧಕರು ಜಂಟಿಯಾಗಿ ಈ ಔಷಧಿಯನ್ನು ಸಿದ್ಧಪಡಿಸಿದ್ದಾರೆ. ಔಷಧಿಯನ್ನು ತಯಾರಿಸುವ ಕೆಲಸ ಪತಂಜಲಿ ಹಾಗೂ ದಿವ್ಯ ಫಾರ್ಮಸಿ ಜಂಟಿಯಾಗಿ ನಡೆಸಲಿವೆ ಎಂದು ಹೇಳಿದರು.

ಕೊವಿಡ್ 19 ರೋಗದ ವಿರುದ್ಧ ಹೋರಾಡಲು ಮೊದಲ ಭಾರಿಗೆ ಆಯುರ್ವೇದದಲ್ಲಿ ಔಷಧಿ ಕಂಡುಹಿಡಿದಿದ್ದೇವೆ.  ಈ ಔಷಧಿಗಳನ್ನು ಈಗಾಗಲೇ ಕ್ಲಿನಿಕಲ್ ಟ್ರಯಲ್ ಮಾಡಲಾಗಿದ್ದು, ಈ ವೇಳೆ ಚಿಕಿತ್ಸೆ ನಡೆಸಿದ ಒಟ್ಟಾರೆ ಸೋಂಕಿತರ ಪೈಕಿ ಶೇ.69 ಮಂದಿ ಸೋಂಕಿತರು ಮೂರೇ ದಿನದಲ್ಲಿ ಗುಣಮುಖರಾಗಿದ್ದು, 7 ದಿನದಲ್ಲಿ ಶೇ.100ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಈ ಔಷಧಿ ಕೊರೋನಾ ವೈರಸ್ ಸಾವಿನ ಪ್ರಮಾಣವನ್ನು ಶೂನ್ಯಗೊಳಿಸಲಿದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪತಂಜಲಿ ಆಯುರ್ವೇದ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ, ಕೊರೋನಾ ಸೋಂಕಿಗೆ ಮೊದಲ ಔಷಧ ಕೊರೊನಿಲ್ ಅನ್ನು ಸಂಪೂರ್ಣ ವೈಜ್ಞಾನಿಕ ದಾಖಲೆಗಳೊಂದಿಗೆ ಇಂದು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.  

ಭಾರತದಲ್ಲಿ ಇದುವರೆಗೆ ಕೊರೋನಾ ಸೋಂಕಿತರ ಸಂಖ್ಯೆ 4.40 ಲಕ್ಷಕ್ಕೆ ತಲುಪಿದೆ. ಇದೇವೇಳೆ 14,011 ಜನರು ಈ ಮಾರಕ ಸಮಸ್ಯೆಗೆ ಬಲಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರು ಕೊರೋನಾ ವೈರಸ್ ಔಷಧಿ ಹಾಗೂ ಲಸಿಕೆಗಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ.

SCROLL FOR NEXT