ರಾಯ್ಪುರ: ಸಿಆರ್'ಪಿಎಫ್, ಐಟಿಬಿಪಿ ಬಳಿಕ ಬಿಎಸ್ಎಫ್ ಪಡೆಗೂ ಮಹಾಮಾರಿ ಕೊರೋನಾ ವೈರಸ್ ತಟ್ಟಿದ್ದು, ಛತ್ತೀಸ್ಗಢದ 15 ಮಂದಿ ಗಡಿ ಭದ್ರತಾ ಪಡೆಯ ಯೋಧರಲ್ಲಿ ವೈರಸ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಛತ್ತೀಸ್ಗಢದ ರಾಯ್ಪುರದಲ್ಲಿ 15 ಮಂದಿ ಬಿಎಸ್ಎಫ್ ಯೋಧರಲ್ಲಿ ವೈರಸ್ ದೃಢಪಟ್ಟಿದೆ. ಬಾಂದಾ ಕ್ಯಾಂಪ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ 10 ಮಂದಿ ಬಿಎಸ್ಎಫ್ ಯೋಧರು, ಅಂಟಾಗರ್ಹ್ ಕ್ಯಾಂಪ್'ನ 5 ಮಂದಿ ಯೋಧರಲ್ಲಿ ವೈರಸ್ ದೃಢಪಟ್ಟಿದೆ ಎಂದು ವರದಿಗಳು ತಿಳಿಸಿವೆ.
ಶೀಘ್ರದಲ್ಲೇ ಸೋಂಕಿತ ಯೋಧರನ್ನು ಬಸ್ತಾರ್'ನ ಜಗ್ದಾಲ್ಪುರದಲ್ಲಿರುವ ಮಹಾರಾಣಿ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ರಜೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದ ಯೋಧರು ಕೆಲ ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ಕಾಂಕೆರ್ ಜಿಲ್ಲಾಧಿಕಾರಿ ಕೆ.ಎಲ್.ಚೌಹಾಣ್ ಅವರು ಮಾಹಿತಿ ನೀಡಿದ್ದಾರೆ.