ದೇಶ

ಕೊರೋನಾಗೆ ಮುಂಬೈ ಪಾನಿಪುರಿ ವ್ಯಾಪಾರಿ ಸಾವು; 2.50 ಲಕ್ಷ ರೂ. ಸಂಗ್ರಹಿಸಿ ಕುಟುಂಬಕ್ಕೆ ಸಹಾಯ ಮಾಡಿದ ನಾಗರಿಕರು

Sumana Upadhyaya

ಮುಂಬೈ: ತಮಗೆ ರುಚಿ ರುಚಿಯಾದ ಪಾನಿಪುರಿ ನೀಡುತ್ತಿದ್ದ ವ್ಯಾಪಾರಿ ಕೊರೋನಾ ಸೋಂಕಿಗೆ ಮೃತಪಟ್ಟಾಗ ದಕ್ಷಿಣ ಮುಂಬೈಯ ಜನರು 2.50 ಲಕ್ಷ ರೂಪಾಯಿ ಹಣ ಸಂಗ್ರಹಿಸಿ ಕುಟುಂಬಸ್ಥರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ದಕ್ಷಿಣ ಮುಂಬೈಯ ಐಷಾರಾಮಿ ಬಡಾವಣೆ ನಪಿಯಾನ್ ಸಮುದ್ರ ರಸ್ತೆಯ ರುಂಗ್ಟಾ ಲೇನ್ ಸಮೀಪ ಭಾಗವತಿ ಯಾದವ್ ಎಂಬುವವರು 5 ದಶಕಗಳಿಂದ ಸಣ್ಣ ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದರು. ವಾಕೇಶ್ವರ ಹತ್ತಿರ ಮಾತಾ ಪಾರ್ವತಿ ನಗರದಿಂದ ಪ್ರತಿನಿತ್ಯ ಇಲ್ಲಿಗೆ ಬಂದು ಪಾನಿಪುರಿ ಮಾರಾಟ ಮಾಡುತ್ತಿದ್ದರು. 

ಅವರು ಮಾಡುವ ಪಾನಿಪುರಿಯೆಂದರೆ ಅಷ್ಟು ರುಚಿ. ಮುಂಬೈಯ ಖ್ಯಾತ ಬೀದಿ ಬದಿ ಸ್ನ್ಯಾಕ್ಸ್ ತಿಂಡಿಗಳಲ್ಲಿ ಭಾಗವತಿ ಯಾದವ್ ಅವರದ್ದು ಸಹ ಒಂದಾಗಿತ್ತು. ಅವರ ಪಾನಿಪುರಿಗೆ ಮನಸೋಲದವರೇ ಇರಲಿಲ್ಲ. ಅಷ್ಟು ರುಚಿಯಾಗಿ, ಸ್ವಚ್ಛವಾಗಿ ಬಿಸ್ಲೆರಿ ನೀರನ್ನು ಬಳಸಿ ಪಾನಿ ಮಾಡುತ್ತಿದ್ದರು. ಹೀಗಾಗಿ ಅವರಿಗೆ ಬಿಸ್ಲೆರಿ ಪಾನಿಪುರಿವಾಲಾ ಎಂದು ಕೂಡ ಜನರು ಅಡ್ಡ ಹೆಸರಿನಿಂದ ಕರೆಯುತ್ತಿದ್ದರು.

ನಾನು ಕಳೆದ 3 ದಶಕಗಳಿಂದ ಅವರ ಸ್ಟಾಲ್ ಗೆ ಹೋಗುತ್ತಿದ್ದೆ. ಒಂದು ದಿನ ಕೂಡ ಪಾನಿಪುರಿಯ ರುಚಿಯಲ್ಲಿ ವ್ಯತ್ಯಾಸವಾಗುತ್ತಿರಲಿಲ್ಲ. ಅಲ್ಲದೆ ಅವರು ಸ್ವಚ್ಛತೆ ಕಾಪಾಡುತ್ತಿದ್ದರು. ಕಳೆದ ಹಲವು ದಿನಗಳಿಂದ ಅಂಗಡಿ ತೆರೆದಿರಲಿಲ್ಲ. ಕೋವಿಡ್ ಗೆ ತೀರಿಕೊಂಡಿದ್ದಾರೆ ಎಂಬ ವಿಷಯ ಗೊತ್ತಾಗಿ ಬೇಸರವಾಯಿತು ಎನ್ನುತ್ತಾರೆ ಎ ಶಾ.

ಈ ಏರಿಯಾದಲ್ಲಿ ಅವರು ಬಹಳ ಜನಪ್ರಿಯ. ಅವರ ಪಾನಿಪುರಿಯನ್ನು ಹಲವಾರು ವರ್ಷಗಳಿಂದ ತಿನ್ನುತ್ತಿದ್ದೆವು. ಈಗ ಅವರಿಲ್ಲದ್ದು ಬೇಸರವಾಗುತ್ತಿದೆ. ಹೀಗಾಗಿ ಅವರ ಕುಟುಂಬಸ್ಥರಿಗೆ ಆರ್ಥಿಕ ಧನ ಸಹಾಯ ಮಾಡಲು ಹಣ ಸಂಗ್ರಹಿಸಿದ್ದೇವೆ ಎನ್ನುತ್ತಾರೆ ಗಿರೀಶ್ ಅಗರ್ವಾಲ್.

ಯಾದವ್ ಅವರಿಗೆ ಪತ್ನಿ ಮತ್ತು ಮಗಳು ಇದ್ದು ಮಗಳು ಗಣಿತ ಶಿಕ್ಷಕಿ. ಆರ್ಥಿಕವಾಗಿ ಅಷ್ಟೊಂದು ಸದೃಢರಲ್ಲದ ಕುಟುಂಬಕ್ಕೆ ಸಹಾಯ ಮಾಡಲು ಅಗರ್ವಾಲ್ www.ketto.org  ಆರಂಭಿಸಿದ್ದು ಇಚ್ಛೆಯುಳ್ಳವರು ಆರ್ಥಿಕ ಈ ಮೂಲಕ ಸಹಾಯ ಮಾಡಬಹುದು ಎಂದು ಕೋರಿದ್ದಾರೆ.

SCROLL FOR NEXT