ದೇಶ

ಭಾರತದ ಕ್ಷಿಪ್ರ ಸೇನಾ ಕಾಮಗಾರಿಗಳಿಗೆ ಬೆದರಿದ ಚೀನಾ,  ಈಗ ಡೆಪ್ಸಾಂಗ್ ಪ್ಲೇನ್ಸ್ ಬಳಿ ಸೇನಾ ನಿಯೋಜನೆ!

Srinivas Rao BV

ನವದೆಹಲಿ: ಈಶಾನ್ಯ ಲಡಾಖ್ ನಲ್ಲಿ ಗಡಿ ಕ್ಯಾತೆ, ಸಂಘರ್ಷದ ನಡುವೆಯೇ, ವಿಚಲಿತಗೊಳ್ಳದ ಭಾರತ ಗಡಿ ಪ್ರದೇಶಗಳಲ್ಲಿ ಸೇನಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತಿರುವುದು ಚೀನಾದ ನಿದ್ದೆಗೆಡಿಸಿದೆ. ಪರಿಣಾಮ ಗಡಿಯಲ್ಲಿ ಎಂದಿಗಿಂತಲೂ ಹೆಚ್ಚಾಗಿ ಅಲರ್ಟ್ ಆಗಿರುವ ಚೀನಾ ಈಗ ಡೆಪ್ಸಾಂಗ್ ಪ್ಲೇಸ್ ಬಳಿಯ ಎಲ್ಎಸಿಯಲ್ಲಿ  ಮತ್ತೆ ಸೇನಾ ಸಿಬ್ಬಂದಿಗಳ ನಿಯೋಜನೆಯನ್ನು ಪ್ರಾರಂಭಿಸಿದೆ ಎಂದು ಜೀ ನ್ಯೂಸ್ ವರದಿ ಪ್ರಕಟಿಸಿದೆ.

ಆಯಕಟ್ಟಿನ ಪ್ರದೇಶದಲ್ಲಿರುವ (ದಾರ್‌ಬುಕ್-ಶ್ಯೋಕ್-ದೌಲತ್ ಬೇಗ್ ಒಲ್ಡಿ, ಡಿಎಸ್-ಡಿಬಿಒ) ರಸ್ತೆಯನ್ನು ಈಗಾಗಲೇ ಭಾರತ ಪೂರ್ಣಗೊಳಿಸಿದೆ. ಇದರ ಹೊರತಾಗಿ ಎಲ್ಎಸಿ ಉದ್ದಕ್ಕೂ ಇರುವ ದಾರ್ ಬುಕ್ ನಿಂದ ದೌಲತ್ ಬೇಗ್ ಒಲ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನೂ ಭಾರತ ನಿರ್ಮಿಸಿದೆ.

ಇದು ಚೀನಾ ಪಡೆಗಳ ನಿದ್ದೆಗೆಡಿಸಿದ್ದು, ಈಗ ಭಾರತ-ಚೀನಾ ಗಡಿಯಲ್ಲಿರುವ ಅನೇಕ ಪ್ರದೇಶಗಳಲ್ಲಿ ಒಟ್ಟಿಗೆ ಸೇನೆ ನಿಯೋಜನೆಗೆ ಚೀನಾ ಮುಂದಾಗಿದೆ. ಈ ನಡುವೆ ಭಾರತ ಸಹ ಚೀನಾ ಚಟುವಟಿಕೆಗಳ ಮೇಲೆ ದೌಲತ್ ಬೇಗ್ ಒಲ್ಡಿ ಮೂಲಕ ಗಮನವಿಡಲು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.

ಗಡಿ ಪ್ರದೇಶದಲ್ಲಿ ಚೀನಾ ಆಕ್ರಮಣಕಾರಿ ನೀತಿಯ ಬಗ್ಗೆ ಜೀ ನ್ಯೂಸ್ ನೊಂದಿಗೆ ಚರಕ ಪ್ರಶಸ್ತಿ ವಿಜೇತ ನಿವೃತ್ತ ಕ್ಯಾಪ್ಟನ್ ತಾಶಿ ಮಾತನಾಡಿದ್ದು, ಭಾರತ ಗಲ್ವಾನ್ ಕಣಿವೆಯಲ್ಲಿ 72 ಗಂಟೆಗಳಲ್ಲಿ ಸೇತುವೆ ನಿರ್ಮಾಣ ಮಾಡುತ್ತದೆ, ರಸ್ತೆ ಕಾಮಗಾರಿಗಳನ್ನು ತ್ವರಿತಗೊಳಿಸುತ್ತದೆ, ಚೀನಾ ಪಡೆಗೆ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ.

ಇವೆಲ್ಲವನ್ನೂ ಭಾರತ ಮಾಡಿದ್ದು ಇದರಿಂದ ಚೀನಾ ಅಸಮಾಧಾನಕ್ಕೊಳಗಾಗಿದೆ. ಡಿಬಿಒ ನಲ್ಲಿನ ರಸ್ತೆಯ ಮೂಲಕ ಚೀನಾ ಪ್ರದೇಶ ಕಾಣಿಸುತ್ತದೆ. ಚೀನಾದ ಪ್ರದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳೂ ಕಾಣಿಸುತ್ತವೆ. ಆದ್ದರಿಂದ ಈಗ ಗಲ್ವಾನ್ ಕಣಿವೆಯಲ್ಲಿ ಹಾಗೂ ಡೆಪ್ಸಾಂಗ್ ಪ್ಲೇನ್ ನಲ್ಲಿ,  ಭಾರತವನ್ನು ಸಂಪೂರ್ಣ ಆಕ್ರಮಿಸಬೇಕೆಂದು ಚೀನಾ ಯತ್ನಿಸುತ್ತಿದೆ. ಇದರ ಭಾಗವಾಗಿ ಡೆಮ್ಚೋಕ್ ಹಾಗೂ ಇತರ ಪ್ರದೇಶಗಳಲ್ಲಿ ಚೀನಾ ಹೊಸ ಹೊಸ ಸೇನಾ ನಿಯೋಜನೆಗಳನ್ನು ಮಾಡತೊಡಗಿದೆ ಎಂದಿದ್ದಾರೆ. ಇನ್ನು ಇದೆಲ್ಲದರ ನಡುವೆ ಭಾರತ ಸರ್ಕಾರ ಲಡಾಖ್ ನ ಗಡಿ ಪ್ರದೇಶದಲ್ಲಿ ಮೂಲಸೌಕರ್ಯ ಹೆಚ್ಚಿಸಲು ನಿರ್ಧರಿಸಿದ್ದು, 54 ಮೊಬೈಲ್ ಟವರ್ ಗಳ ನಿರ್ಮಾಣವನ್ನೂ ಪ್ರಾರಂಭಿಸಿದೆ.

SCROLL FOR NEXT