ದೇಶ

ಜುಲೈ 15ರ ಹೊತ್ತಿಗೆ ಸಿಬಿಎಸ್ಇ ಫಲಿತಾಂಶ: ಮೌಲ್ಯಮಾಪನ ಯೋಜನೆಯಡಿ ವಿದ್ಯಾರ್ಥಿಗಳಿಗೆ ಅಂಕ

Sumana Upadhyaya

ನವದೆಹಲಿ: ಹತ್ತು ಮತ್ತು ಹನ್ನೆರಡನೇ ತರಗತಿಗಳ ಬಾಕಿ ಉಳಿದಿರುವ ಪರೀಕ್ಷೆಗಳಿಗೆ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳಿಗೆ ಅಂಕ ನೀಡುವ ಸಿಬಿಎಸ್ಇ ಯೋಜನೆಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮೋದನೆ ನೀಡಿದೆ.

ಸಿಬಿಎಸ್ ಇ ಈಗಾಗಲೇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿರುವ ಪರೀಕ್ಷೆಗಳಲ್ಲಿ ಪಡೆದಿರುವ ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನ ಕಾರ್ಯಕ್ಷಮತೆ(internal assessment performance) ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಫಲಿತಾಂಶ ನೀಡಲಿದೆ. ಫಲಿತಾಂಶ ಜುಲೈ 15ರ ಹೊತ್ತಿಗೆ ಪ್ರಕಟವಾಗಲಿದೆ ಎಂದು ಮಂಡಳಿ ಪರವಾಗಿ ನ್ಯಾಯಾಲಯದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಹತ್ತು ಮತ್ತು ಹನ್ನೆರಡೇ ತರಗತಿಯ ಉಳಿದ ಪರೀಕ್ಷೆಗಳನ್ನು ನಡೆಸುವುದಿಲ್ಲ. ಕೋವಿಡ್-19 ಪರಿಸ್ಥಿತಿ ಸುಧಾರಿಸಿದ ಬಳಿಕ ಮಂಡಳಿ ನಡೆಸುವ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಬಹುದು. ಇದು ವಿದ್ಯಾರ್ಥಿಗಳ ಪರವಾದ ನಿರ್ಧಾರ ಎಂದು ತುಶಾರ್ ಮೆಹ್ತಾ ನ್ಯಾಯಾಲಯಕ್ಕೆ ಹೇಳಿದರು.

ಸಿಬಿಎಸ್ ಇ 10 ಮತ್ತು 12ನೇ ತರಗತಿ ಪರೀಕ್ಷೆ ಕಳೆದ ಫೆಬ್ರವರಿ 15ರಂದು ಆರಂಭವಾಗಿತ್ತು, ಆದರೆ ಮಾರ್ಚ್ 18ರಂದು ಕೊರೋನಾ ಹಿನ್ನೆಲೆಯಲ್ಲಿ ಕೆಲ ಪರೀಕ್ಷೆಗಳನ್ನು ಬಾಕಿ ಉಳಿಸಿಕೊಂಡು ಮುಂದೂಡಲಾಗಿತ್ತು.

ಇಂದು ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಅವರ ನೇತೃತ್ವದ ನ್ಯಾಯಪೀಠ, ಮುಂದೆ ಪರೀಕ್ಷೆಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳು ಮೌಲ್ಯಮಾಪನ ಯೋಜನೆಯಡಿ ಅಂಕಗಳನ್ನು ಪಡೆಯಬಹುದು, ಪರೀಕ್ಷೆಗಳನ್ನು ನಡೆಸುವುದಾದರೆ ಸರ್ಕಾರವೇ ನಿರ್ಧರಿಸಲಿ, ನ್ಯಾಯಾಲಯ ದಿನಾಂಕ ನಿಗದಿಪಡಿಸುವುದಿಲ್ಲ ಎಂದು ಹೇಳಿತು.

ಸಿಬಿಎಸ್ ಇ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಧಿಸೂಚನೆ ಪ್ರಕಾರ ಮೂರು ವಿಷಯಗಳಿಗಿಂತ ಹೆಚ್ಚಿಗೆ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾಗಿದ್ದರೆ ಆ ಮೂರು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಆಧಾರದ ಮೇಲೆ ಬಾಕಿ ಉಳಿದಿರುವ ಪರೀಕ್ಷೆಗೆ ಅಂಕಗಳನ್ನು ನೀಡುತ್ತದೆ.

ಇನ್ನು 12ನೇ ತರಗತಿ ವಿದ್ಯಾರ್ಥಿಗಳಿಗೆ ಅದರಲ್ಲೂ ಈಶಾನ್ಯ ದೆಹಲಿಯಂಥಹ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಪರೀಕ್ಷೆ ಮುಂದೂಡಲಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಈಗಾಗಲೇ ಒಂದು ಅಥವಾ ಎರಡು ಪರೀಕ್ಷೆಗೆ ಹಾಜರಾಗಿದ್ದರೆ ಅದರಲ್ಲಿ ಪಡೆದ ಅಂಕಗಳು ಮತ್ತು ಇಂಟರ್ನಲ್/ಪ್ರಾಕ್ಟಿಕಲ್ ಪ್ರಾಜೆಕ್ಟ್ ಗಳಲ್ಲಿ ಪಡೆದಿರುವ ಅಂಕಗಳನ್ನು ಆಧರಿಸಿ ಫಲಿತಾಂಶ ನೀಡಲಾಗುತ್ತದೆ.

ಇನ್ನೊಂದೆಡೆ ಇಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ ಐಸಿಎಸ್ಇ ಕೆಲವು ಆಯ್ಕೆ ಪರೀಕ್ಷೆಗಳನ್ನು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಾಡಬೇಕಾಗುತ್ತದೆ. ಸಿಬಿಎಸ್ ಇಗಿಂತ ಕೆಲವು ಅಂಕಗಳ ಅರ್ಹತೆ ಕ್ರಮದಲ್ಲಿ ಐಸಿಎಸ್ಇ ಗೆ ಬದಲಾವಣೆಯಿರುತ್ತದೆ ಎಂದು ಹೇಳಿದೆ. ಅದಕ್ಕೆ ನ್ಯಾಯಾಲಯ ಇನ್ನೊಂದು ವಾರದಲ್ಲಿ ಸಮಗ್ರ ಅಧಿಸೂಚನೆಯೊಂದಿಗೆ  ಹಾಜರಾಗುವಂತೆ ಸೂಚಿಸಿತು.

SCROLL FOR NEXT