ದೇಶ

'ಹೆಣ್ಣಿನಂತೆ ಬದುಕಲು ಬಿಡಿ': ಕೇರಳದ 17ರ ಬಾಲಕನ ಮನವಿ

Vishwanath S

ಮಲಪ್ಪುರಂ: ಕೇರಳದ ಬಾಲಕನೊಬ್ಬ ಮಹಿಳೆಯಂತೆ ಬದುಕಬೇಕೆಂಬ ಹಂಬಲ ವ್ಯಕ್ತಪಡಿಸಿ, ಅದಕ್ಕಾಗಿ ಅವಕಾಶ ಮಾಡಿಕೊಡುವಂತೆ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಿದ್ದಾನೆ.

ತನ್ನ ಜೀವನದುದ್ದಕ್ಕೂ ಮಹಿಳೆಯಂತೆ ಬದುಕಬೇಕೆಂಬ ಆಳವಾದ ಬಯಕೆಯನ್ನು ವ್ಯಕ್ತಪಡಿಸಿ ಇಲ್ಲಿನ ಮಕ್ಕಳ ಕಲ್ಯಾಣ ಸಮಿತಿಯನ್ನು (ಸಿಡಬ್ಲ್ಯುಸಿ) ಸಂಪರ್ಕಿಸಿರುವ ದ 17 ವರ್ಷದ ಬಾಲಕನನ್ನು ಒಂದು ತಿಂಗಳ ಮಟ್ಟಿಗೆ ಆರೈಕೆ ಹಾಗೂ ರಕ್ಷಣೆಗಾಗಿ ಮಂಗಳಮುಖಿಯರಿಗೆ ಒಪ್ಪಿಸಲಾಗಿದೆ.

ಹೆಣ್ಣಿನಂತೆ ಬದುಕಬೇಕೆಂಬ ತನ್ನ ಬಯಕೆಯನ್ನು ಮನೆಯವರೊಡನೆ ಹೇಳಿಕೊಂಡಿದ್ದರಿಂದ ಕಿರುಕುಳ ಮತ್ತು ಒತ್ತಡ ಅನುಭವಿಸಿದ್ದಾಗಿ ಬಾಲಕ ದೂರು ನೀಡಿದ್ದಾನೆ. ತಾನು ಸುರಕ್ಷಿತ ಸ್ಥಳದಲ್ಲಿರಲು ಬಯಸುತ್ತೇನೆ ಮತ್ತು ತನಗೆ ಬೇಕಾದಂತೆ ಬದುಕಲು ಬಿಡಿ ಎಂದು ಕೇಳಿಕೊಂಡಿದ್ದಾನೆ. 

ಹುಡುಗನ ಆಸೆಯ ಮೇರೆಗೆ ಮತ್ತು ಆತನ ಹಿತಾಸಕ್ತಿಯನ್ನು ಪರಿಗಣಿಸಿ, ಸಿಡಬ್ಲ್ಯುಸಿ ಶುಕ್ರವಾರ ತನ್ನ ಮಧ್ಯಂತರ ಆದೇಶವನ್ನು ಹೊರಡಿಸಿ, ಹತ್ತಿರದ ಪೆರಿಂಟಲ್ಮನ್ನಾದಲ್ಲಿರುವ ಮಂಗಳಮುಖಿಯರಿಗೆ ಬಾಲಕನ ಕಸ್ಟಡಿಯನ್ನು ಒಂದು ತಿಂಗಳ ಕಾಲ ಆರೈಕೆ ಮತ್ತು ರಕ್ಷಣೆಗಾಗಿ ನೀಡಿದ್ದಾರೆ.

ಮಗ ಹೆಣ್ಣಾಗಿ ಬದಲಾಗಿ ಕೈತಪ್ಪಿ ಹೋಗುತ್ತಾನೆಂಬ ಆತಂಕದಲ್ಲಿರುವ ಪೋಷಕರಿಗೆ ಧೈರ್ಯ ತುಂಬಲಾಗಿದೆ. ಮಂಗಳಮುಖಿಯರು ಅಥವಾ ತೃತೀಯಲಿಂಗಿಗಳೂ ಸಹ ಸ್ವಾವಲಂಬಿಯಾಗಿ ಬದುಕಬಲ್ಲರು ಎಂದು ಮನವರಿಕೆ ಮಾಡಿಕೊಡಲಾಗಿದೆ.

ಬಾಲಕನ ತಂದೆಯೂ ಸಹ ಸ್ತ್ರೀಯಂತೆ ವರ್ತಿಸುತ್ತಾರಾದರೂ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ ತಿಳಿಸಿದೆ.

SCROLL FOR NEXT