ದೇಶ

ಕೊರೋನಾ ವಿರುದ್ಧ ಹೋರಾಟಕ್ಕೆ ಭಾರತೀಯರು ಬೆಂಬಲ ನೀಡುತ್ತಿದ್ದಾರೆ, ಲಾಕ್ ಡೌನ್ ಪ್ರಯೋಜನವಾಗಿದೆ:ಪಿಎಂ ಮೋದಿ

Sumana Upadhyaya

ವಾಷಿಂಗ್ಟನ್: ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟ ಜನರಿಂದಲೇ ಆರಂಭವಾಗಿದ್ದು ಆರಂಭದ ಹಂತದಲ್ಲಿ ಹೇರಲಾದ ಲಾಕ್ ಡೌನ್ ಜನರ ಸಹಕಾರದಿಂದ ಯಶಸ್ವಿಯಾಯಿತು, ಸೂಕ್ತ ಸಮಯಕ್ಕೆ ಲಾಕ್ ಡೌನ್ ಹೇರಿದ್ದರಿಂದ ಲಕ್ಷಾಂತರ ಜನರ ಪ್ರಾಣ ಉಳಿಯಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತ ಮೂಲದ ಅಮೆರಿಕದ ವೈದ್ಯರುಗಳ ಸಮೂಹ(ಎಎಪಿಐ) ಉದ್ದೇಶಿಸಿ ನಿನ್ನೆ ವರ್ಚುವಲ್ ಸಂವಾದದಲ್ಲಿ ಮಾತನಾಡಿದ ಅವರು, ದೇಶವನ್ನು ಸ್ವಾವಲಂಬನೆಯೆಡೆಗೆ ಕೊಂಡೊಯ್ಯಲು ಕೋವಿಡ್-19ನ್ನು ಒಂದು ಅವಕಾಶವನ್ನಾಗಿ ಪರಿಗಣಿಸಿ ಆ ನಿಟ್ಟಿನಲ್ಲಿ ಭಾರತ ಹೆಜ್ಜೆಯಿಡುತ್ತಿದೆ ಎಂದರು.

ಅಮೆರಿಕದಲ್ಲಿ 80 ಸಾವಿರಕ್ಕೂ ಅಧಿಕ ಭಾರತೀಯ ಮೂಲದ ವೈದ್ಯರುಗಳಿದ್ದು ಅವರನ್ನುದ್ದೇಶಿಸಿ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಮಾತನಾಡಿದ್ದಾರೆ. ಕೋವಿಡ್-19ಗೆ ಸಂಬಂಧಪಟ್ಟಂತೆ ವಿವಿಧ ದೇಶಗಳ ಅಂಕಿಅಂಶಗಳನ್ನು ಈ ಸಂದರ್ಭದಲ್ಲಿ ಮುಂದಿಟ್ಟ ಪ್ರಧಾನಿ ಬೇರೆ ಕೆಲವು ದೇಶಗಳಿಗೆ ಹೋಲಿಸಿದರೆ ಭಾರತದ ಪರಿಸ್ಥಿತಿ ಬಹಳಷ್ಟು ಉತ್ತಮವಾಗಿದೆ. ಅಮೆರಿಕದಲ್ಲಿ 10 ಲಕ್ಷಕ್ಕೆ 350 ಮಂದಿ ಕೋವಿಡ್-19ಗೆ ಮೃತಪಟ್ಟರೆ, ಯುರೋಪ್ ಖಂಡದ ರಾಷ್ಟ್ರಗಳಾದ ಇಂಗ್ಲೆಂಡ್, ಇಟಲಿ, ಸ್ಪೈನ್ ನಂತಹ ದೇಶಗಳಲ್ಲಿ ಪ್ರತಿ ಹತ್ತು ಲಕ್ಷಕ್ಕೆ 600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಹತ್ತು ಲಕ್ಷಕ್ಕೆ 12 ಮಂದಿ ಮೃತಪಡುತ್ತಿದ್ದಾರೆ  ಎಂದು ಪ್ರಧಾನಿ ಹೇಳಿದರು.

ಭಾರತದಲ್ಲಿ ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ಕೊರೋನಾ ವಿರುದ್ಧ ಹೋರಾಟದಲ್ಲಿ ಉತ್ತಮ ಕೆಲಸ ಮಾಡುತ್ತಿವೆ. ಇದೆಲ್ಲಾ ಸಾಧ್ಯವಾಗಿದ್ದು ದೇಶದ ನಾಗರಿಕರ ಸಹಕಾರ, ಬೆಂಬಲದಿಂದ. ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ಅಷ್ಟೊಂದು ಮಟ್ಟಕ್ಕೆ ಇನ್ನೂ ವ್ಯಾಪಿಸಿಲ್ಲ ಎಂದಿದ್ದಾರೆ.

ಪ್ರಪಂಚದಲ್ಲಿಯೇ ಜನಸಂಖ್ಯೆಯಲ್ಲಿ ಎರಡನೆ ಅತಿದೊಡ್ಡ ದೇಶವಾಗಿರುವ ಭಾರತದಲ್ಲಿ ಕೊರೋನಾ ಸೋಂಕು ನಿಯಂತ್ರಣದಲ್ಲಿದೆ. ಸಾಮಾಜಿಕವಾಗಿ ಒಟ್ಟು ಸೇರುವುದು, ಧಾರ್ಮಿಕ ಚಟುವಟಿಕೆಗಳು, ರಾಜಕೀಯ ಸಭೆ-ಸಮಾರಂಭಗಳು ಹೆಚ್ಚಾಗಿರುವ, ವಲಸೆ ಕಾರ್ಮಿಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದು, ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಿರುವ ಭಾರತ ದೇಶದಲ್ಲಿ ಆ ವಿಷಯಗಳಿಗೆ ಹೋಲಿಸಿದರೆ ಕೊರೋನಾ ಸೋಂಕು ಅಷ್ಟೊಂದು ಇನ್ನೂ ವ್ಯಾಪಿಸಿಲ್ಲ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿದ ಸೌಲಭ್ಯ: ಕೋವಿಡ್-19ನ್ನು ಅವಕಾಶವನ್ನಾಗಿ ಬದಲಾಯಿಸಿಕೊಳ್ಳಲಾಗುತ್ತಿದ್ದು ಆರೋಗ್ಯ ವಲಯದಲ್ಲಿ ಸೌಲಭ್ಯ ಹೆಚ್ಚಾಗಿದೆ. ಕೊರೋನಾ ವೈರಸ್ ಆರಂಭಕ್ಕೆ ಕೋವಿಡ್ -19 ಪರೀಕ್ಷಾ ಕೇಂದ್ರವಿತ್ತು. ಆದರೆ ಇಂದು ಸಾವಿರ ಕೋವಿಡ್-19 ಕೇಂದ್ರಗಳಿವೆ. ವೈಯಕ್ತಿಕ ರಕ್ಷಣೆ ಉಪಕರಣ(ಪಿಪಿಇ) ಕಿಟ್ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಇಂದು ಅದರಲ್ಲಿ ಸ್ವಾವಲಂಬಿಯಾಗಿದ್ದು ರಫ್ತು ಮಾಡುವ ಸ್ಥಿತಿಗೆ ತಲುಪಿದೆ. ಇಂದು ಭಾರತ ದೇಶದಲ್ಲಿ ವಾರಕ್ಕೆ 30 ಲಕ್ಷಕ್ಕಿಂತ ಅಧಿಕ ಎನ್ 95 ಮಾಸ್ಕ್ ಗಳು ತಯಾರಾಗುತ್ತವೆ. 50 ಸಾವಿರಕ್ಕೂ ಅಧಿಕ ಹೊಸ ವೆಂಟಿಲೇಟರ್ ಗಳು ಸಿಗುತ್ತಿವೆ, ಇವೆಲ್ಲವೂ ಭಾರತದಲ್ಲಿಯೇ ತಯಾರಾಗುತ್ತಿವೆ ಎಂದು ಪ್ರಧಾನಿ ಹೆಮ್ಮೆಯಿಂದ ಅಮೆರಿಕದಲ್ಲಿರುವ ವೈದ್ಯರುಗಳೊಂದಿಗೆ ಹೇಳಿಕೊಂಡರು.

SCROLL FOR NEXT