ದೇಶ

ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಹತ್ಯೆ, ದೋಡಾ ಜಿಲ್ಲೆ ಉಗ್ರ ಮುಕ್ತ: ಜಮ್ಮು-ಕಾಶ್ಮೀರ ಪೊಲೀಸರು

Sumana Upadhyaya

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ಸೋಮವಾರ ನಸುಕಿನ ಜಾವ ಅನಂತ್ ನಾಗ್ ಜಿಲ್ಲೆಯಲ್ಲಿ ಹತ್ಯೆಗೈದ ಮೂವರು ಉಗ್ರರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಕೂಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಮಸೂದ್ ಅಹ್ಮದ್ ಭಟ್ ಮತ್ತು ಮತ್ತಿಬ್ಬರು ಉಗ್ರರನ್ನು ಭದ್ರತಾ ಪಡೆ ಪೊಲೀಸರು ದಕ್ಷಿಣ ಕಾಶ್ಮೀರದ ಖುಲ್ಚೊಹರ್ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ಇಂದು ನಸುಕಿನ ಜಾವ ಹತ್ಯೆಗೈದಿದ್ದರು. ಮಸೂದ್ ಸಾವಿನಿಂದಾಗಿ ಜಮ್ಮು ಪ್ರಾಂತ್ಯದ ಇಡೀ ದೊಡಾ ಜಿಲ್ಲೆ ಉಗ್ರರ ಉಪಟಳದಿಂದ ಮುಕ್ತವಾಗಿದ್ದು, ಈತನೊಬ್ಬನೇ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿಆರ್ ಪಿಎಫ್ ಜಂಟಿಯಾಗಿ ನಡೆಸಿತ್ತು. ಮೂವರು ಉಗ್ರರನ್ನು ಹತ್ಯೆಗೈದ ಬಳಿಕ ಎನ್ ಕೌಂಟರ್ ನಡೆದ ಸ್ಥಳದಿಂದ ಒಂದು ಎಕೆ ರೈಫಲ್ ಮತ್ತು ಎರಡು ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. 

ದೊಡ ಪೊಲೀಸರು ಸಲ್ಲಿಸಿದ್ದ ಅತ್ಯಾಚಾರ ಕೇಸಿನಲ್ಲಿ ಮಸೂದ್ ಭಾಗಿಯಾಗಿದ್ದು ಪೊಲೀಸರಿಂದ ತಪ್ಪಿಸಿಕೊಂಡಿದ್ದ. ನಂತರ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಸೇರಿ ಕಾಶ್ಮೀರಕ್ಕೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದ. 

ಜಮ್ಮು-ಕಾಶ್ಮೀರದಲ್ಲಿ 29 ವಿದೇಶಿ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

SCROLL FOR NEXT