ದೇಶ

ಮೇಕ್ ಇನ್ ಇಂಡಿಯಾ ಜಪ ಮಾಡುವ ಬಿಜೆಪಿಯಿಂದಲೇ ಚೀನಾ ವಸ್ತುಗಳ ಹೆಚ್ಚು ಖರೀದಿ: ರಾಹುಲ್ 

Manjula VN

ನವದೆಹಲಿ: ಮೇಕ್ ಇಂಡಿಯಾ ಜಪ ಮಾಡುವ ಬಿಜೆಪಿಯೇ ತನ್ನ ಆಡಳಿತಾವಧಿಯಲ್ಲಿ ಹೆಚ್ಚು ಚೀನಾ ವಸ್ತುಗಳನ್ನು ಖರೀದಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ಅವರು, ಸುಳ್ಳು ಬೇಡ, ಸತ್ಯ ಹೇಳಿ. ಮೇಕ್ ಇಂಡಿಯಾ ಎಂದು ಸದಾ ಹೇಳುವ ಬಿಜೆಪಿಯೇ ತನ್ನ ಆಡಳಿತಾವಧಿಯಲ್ಲಿ ಹೆಚ್ಚು ಚೀನಾ ವಸ್ತುಗಳನ್ನು ಖರೀದಿ ಮಾಡಿದೆ ಎಂದು ಹೇಳಿದ್ದಾರೆ. 

ಅಲ್ಲದೆ, ಇದೇ ವೇಳೆ ಯುಪಿಎ ಆಡಳಿತಾವಧಿ ಹಾಗೂ ಎನ್'ಡಿಎ ಆಡಳಿತಾವಧಿಯಲ್ಲಿ ಖರೀದಿ ಮಾಡಿರುವ ಚೀನಾ ವಸ್ತುಗಳ ಶೇಕಡವಾರು ನಕ್ಷೆಯೊಂದನ್ನು ಹಂಚಿಕೊಂಡಿದ್ದಾರೆ. 

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಶೇ.12-13 ರಷ್ಟು ಚೀನಾ ವಸ್ತುಗಳನ್ನು ಆಮದು ಮಾಡಿಕೊಂಡಿದ್ದರೆ. ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಶೇ.17-18ರಷ್ಟು ಚೀನಾ ವಸ್ತುಗಳನ್ನು ಆಮದು ಮಾಡಿಕೊಂಡಿದೆ ಎಂದು ರಾಹುಲ್ ಹಂಚಿಕೊಂಡಿರುವ ನಕ್ಷೆಯಲ್ಲಿ ಮಾಹಿತಿ ನೀಡಲಾಗಿದೆ. 

ಲಡಾಖ್ ನಲ್ಲಿ ಭಾರತ ಹಾಗೂ ಚೀನಾ ಸೇನಾಪಡೆಗಳ ನಡುವೆ ಸಂಘರ್ಷ ಏರ್ಪಟ್ಟ ಬಳಿಕ ದೇಶದಲ್ಲಿ ಚೀನಾ ವಸ್ತುಗಳ ನಿಷೇಧಿಸುವ ಕುರಿತು ದೊಡ್ಡ ಮಟ್ಟದ ಆಂದೋಲನಗಳೇ ಆರಂಭಗೊಂಡಿದೆ. 

SCROLL FOR NEXT