ದೇಶ

ದೆಹಲಿ ಹಿಂಸಾಚಾರ: ಮತ್ತೆ 4 ಮೃತದೇಹ ಪತ್ತೆ, 254 ಎಫ್ಐಆರ್ ದಾಖಲು, 903 ಮಂದಿ ಬಂಧನ

Lingaraj Badiger

ನವದೆಹಲಿ: 42ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿದ್ದ ಕೋಮುಗಲಭೆ ಒಂದು ವಾರದ ನಂತರ ಶಾಂತಿಯುತವಾಗಿದೆ. ಆದರೆ ಭಾನುವಾರ ಗೋಕುಲಪುರಿ ಮತ್ತು ಶಿವ ವಿಹಾರ್ ನ  ಚರಂಡಿಯಲ್ಲಿ ಮತ್ತೆ ನಾಲ್ಕು ಮೃತ ದೇಹಗಳು ಪತ್ತೆಯಾಗಿದ್ದು, ರಾಷ್ಟ್ರ ರಾಜಧಾನಿಯ ಜನರಲ್ಲಿ ಆತಂಕ ಹೆಚ್ಚಿಸಿದೆ.

ಗಲಭೆ ಪೀಡಿತ ಪ್ರದೇಶಗಳಲ್ಲಿ ಅರೆ ಸೇನಾಪಡೆಗಳಿಂದ ಬಿಗಿ ಭದ್ರತೆ ಮುಂದುವರೆದಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 254 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ ಮತ್ತು 903 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ. ವದಂತಿ ಹಬ್ಬಿಸುವವರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಪೊಲೀಸರು ದೆಹಲಿ ಜನತೆಗೆ ಮನವಿ ಮಾಡಿದ್ದಾರೆ.

ಈ ಮಧ್ಯೆ, ಇಂದು ಚರಂಡಿಯಲ್ಲಿ ಪತ್ತೆಯಾದ ಮೃತ ದೇಹಗಳು ಈಶಾನ್ಯ ದೆಹಲಿಯಲ್ಲಿನ ಗಲಭೆಗೆ ಸಂಬಂಧಪಟ್ಟಿದ್ದೋ ಅಲ್ಲವೋ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ. ಅಧಿಕಾರಿಗಳು ಗಲಭೆ ಸಾವು-ನೋವಿಗೆ ಸಂಬಂಧಿಸಿದ ಪರಿಷ್ಕೃತ ಅಂಕಿ-ಅಂಶಗಳನ್ನು ಪ್ರಕಟಿಸಿಲ್ಲ.

ಬೆಳಿಗ್ಗೆ ವೇಳೆಗೆ ಪೊಲೀಸ್ ಪಿಸಿಆರ್ ಗೆ ಭಗೀರತ್ ನಗರದ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿರುವುದರ ಬಗ್ಗೆ ಕರೆ ಬಂದಿತ್ತು. ಮಧ್ಯಾಹ್ನದ ವೇಳೆಗೆ ಎರಡನೇ ಮೃತದೇಹ ಅದೇ ಚರಂಡಿಯಲ್ಲಿ ಪತ್ತೆಯಾಗಿತ್ತು. ಮೂರನೇ ಮೃತ ದೇಹ ಗೋಕುಲ್ ಪುರಿ ಪೊಲೀಸ್ ಠಾಣೆ ಬಳಿ ಇರುವ ಚರಂಡಿಯಲ್ಲಿ ಪತ್ತೆಯಾಗಿದ್ದರೆ ನಾಲ್ಕನೆ ಮೃತದೇಹ ಶಿವ್ ವಿಹಾರ್ ಬಳಿ ಇರುವ ಚರಂಡಿಯಲ್ಲಿ ಪತ್ತೆಯಾಗಿದೆ.  ಪತ್ತೆಯಾಗಿರುವ ಮೃತದೇಹಗಳ ಗುರುತು ಇನ್ನೂ ತಿಳಿದುಬಂದಿಲ್ಲ. 

SCROLL FOR NEXT