ದೇಶ

ದೇಶದಲ್ಲಿ ಶಾಂತಿ ಕಾಪಾಡಲು ಯಾವುದೇ ಪಾತ್ರ ವಹಿಸಲು ನಾನು ಸಿದ್ಧ: ರಜನಿಕಾಂತ್

Lingaraj Badiger

ಚೆನ್ನೈ: ಎರಡು ದಿನಗಳ ಹಿಂದಷ್ಟೇ ದೆಹಲಿ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು, ದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ತಾನು ಯಾವುದೇ ಪಾತ್ರ ವಹಿಸಲು ಸಿದ್ಧ ಎಂದು ಭಾನುವಾರ ಹೇಳಿದ್ದಾರೆ.

ಸಿಎಎ ಜಾರಿಯಿಂದ ಒಬ್ಬ ಭಾರತೀಯ ಮುಸ್ಲಿಂಗೆ ತೊಂದರೆಯಾದರೂ ಪ್ರತಿಭಟನೆಯ ಮುಂದಾಳತ್ವ ವಹಿಸುವೆ ಎಂದು ರಜನಿಕಾಂತ್‌ ಅವರು ಹೇಳಿಕೆ ನೀಡಿರುವ ಬೆನ್ನಿಗೆ ತಮಿಳುನಾಡು ಜಮಾತುಲ್‌ ಉಲಾಮ ಸಬಾಯಿ ಸಂಸ್ಥೆಯ ಮುಸ್ಲಿಂ ಪ್ರತಿನಿಧಿಗಳು ಇಂದು ನಟನನ್ನು ಭೇಟಿ ಮಾಡಿದ್ದರು. 

ಮುಸ್ಲಿಂ ಪ್ರತಿನಿಧಿಗಳ ಭೇಟಿಯ ಬಳಿಕ ಟ್ವೀಟ್ ಮಾಡಿರುವ ರಜನಿಕಾಂತ್ ಅವರು, "ದೇಶದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಯಾವುದೇ ಪಾತ್ರವನ್ನು ವಹಿಸಲು ನಾನು ಸಿದ್ಧನಿದ್ದೇನೆ. ದೇಶದ ಪ್ರಮುಖ ಉದ್ದೇಶವೆಂದರೆ ಪ್ರೀತಿ, ಐಕ್ಯತೆ ಮತ್ತು ಶಾಂತಿ ಎಂಬ ಅವರ(ಮುಸ್ಲಿಂ ಸಂಘಟನೆಯ ನಾಯಕರು) ಹೇಳಿಕೆಯನ್ನು ನಾನು ಕೂಡ ಒಪ್ಪುತ್ತೇನೆ ” ಎಂದು ಹೇಳಿದ್ದಾರೆ.

ಕಳೆದ ವಾರ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮುಗಲಭೆಯಲ್ಲಿ 42 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಗಲಭೆಯಲ್ಲಿ ತೀವ್ರವಾಗಿ ಖಂಡಿಸಿದ್ದ ರಜನಿಕಾಂತ್ ಅವರು, ಕೇಂದ್ರ ಸರ್ಕಾರ ಗಲಭೆಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದರು. ಅಲ್ಲದೆ ಹಿಂಸಾಚಾರ ನಿಯಂತ್ರಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಹೇಳಿದ್ದರು.

ಇಂದು ರಜನಿಕಾಂತ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಮುಸ್ಲಿಂ ಸಂಘಟನೆಯ ಪ್ರತಿನಿಧಿಗಳು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಬಗ್ಗೆ ಇರುವ ಆತಂಕಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT