ದೇಶ

ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧ ನಾಳೆ ಆರಂಭ: ಸರ್ಕಾರವನ್ನು ಕಟ್ಟಿಹಾಕಲು ವಿರೋಧ ಪಕ್ಷಗಳ ತಂತ್ರ 

Sumana Upadhyaya

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗ ನಾಳೆ ಆರಂಭವಾಗಲಿದ್ದು, ಈ ಬಾರಿ ಕಲಾಪ ಭಾರೀ ಗದ್ದಲ, ಆರೋಪ, ಪ್ರತ್ಯಾರೋಪಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. 


ಬಜೆಟ್ ಅಧಿವೇಶನದ ಇನ್ನುಳಿದ ದಿನಗಳನ್ನು ಕೇಂದ್ರ ಸರ್ಕಾರ ಪ್ರಮುಖ ಮಸೂದೆ ಮಂಡನೆ ಜಾರಿಗೆ ಬಳಸಿಕೊಳ್ಳಲು ನೋಡಿದರೆ ದೆಹಲಿ ಹಿಂಸಾಚಾರ, ಆರ್ಥಿಕತೆ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಎಲ್ಲಾ ಕಡೆಯಿಂದಲೂ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ನೋಡುವುದು ನಿಶ್ಚಿತ. 


ಕಳೆದ ವಾರದ ಆರಂಭದಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ 42 ಮಂದಿ ಬಲಿಯಾಗಿದ್ದಾರೆ. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಪಟ್ಟುಹಿಡಿದು ಕುಳಿತಿವೆ. ರಾಜಧಾನಿ ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವುದರಿಂದ ಸಹಜವಾಗಿಯೇ ಕೇಂದ್ರ ಸರ್ಕಾರ ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಸರ್ಕಾರದತ್ತ ಬೆಟ್ಟು ಮಾಡಿ ಆರೋಪಿಸುತ್ತಿವೆ. 


ಇನ್ನೊಂದೆಡೆ ಬಿಜೆಪಿ ಇದಕ್ಕೆಲ್ಲಾ ಕಾಂಗ್ರೆಸ್ ಕಾರಣ, ಪೌರತ್ವ ತಿದ್ದುಪಡಿ ಕಾಯ್ದೆ ಹೆಸರಿನಲ್ಲಿ ಜನರನ್ನು ಪ್ರಚೋದಿಸಿ ಬೇಕೆಂದೇ ಗದ್ದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ. 


ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಸದನದಲ್ಲಿ ಪಕ್ಷ ಯಾವ ರೀತಿ ತರಾಟೆಗೆ ತೆಗೆದುಕೊಳ್ಳಬೇಕೆಂದು ನಿನ್ನೆ ಸೋನಿಯಾ ಗಾಂಧಿಯವರು ದೆಹಲಿಯಲ್ಲಿ ಪಕ್ಷದ ಸಭೆ ನಡೆಸಿ ಚರ್ಚಿಸಿದರು. ದೇಶದಲ್ಲಿ ಜಿಡಿಪಿ ಕೊರತೆಯಿದ್ದು ಆರ್ಥಿಕತೆ ದಿನೇ ದಿನೇ ಕುಸಿಯುತ್ತಿದೆ, ಇದಕ್ಕೆ ಸರ್ಕಾರ ಸೂಕ್ತ ಆರ್ಥಿಕ ನಿರ್ವಹಣೆ ಮಾಡದಿರುವುದೇ ಕಾರಣ ಎಂದು ಆರೋಪಿಸಿದ್ದಾರೆ.


ಸಂಸತ್ತಿನ ಮೊದಲ ಭಾಗದ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಿ ಫೆಬ್ರವರಿ 11ರಂದು ಮುಕ್ತಾಯವಾಗಿತ್ತು. ಹಣಕಾಸು ಮಸೂದೆ 2020, ವಿಮಾನ (ತಿದ್ದುಪಡಿ) ಮಸೂದೆ ಮತ್ತು ನೇರ ತೆರಿಗೆ ವಿವಾಡ್ ಸೆ ವಿಶ್ವಾಸ್ ಮಸೂದೆ ಮಂಡನೆಯಾಗಿವೆ.ಬಜೆಟ್ ಅಧಿವೇಶನ ಏಪ್ರಿಲ್ 3ಕ್ಕೆ ಮುಕ್ತಾಯವಾಗಲಿದೆ.

SCROLL FOR NEXT