ದೇಶ

ಸಂಸತ್ ನಲ್ಲಿ ಪ್ರತಿಧ್ವನಿಸಿದ ದೆಹಲಿ ಹಿಂಸಾಚಾರ, ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ

Srinivas Rao BV

ನವದೆಹಲಿ: ದೆಹಲಿ ಹಿಂಸಾಚಾರ ಕುರಿತು ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ಉಂಟುಮಾಡಿದ ಗದ್ದಲ, ಕೋಲಾಹಲ ಕಾರಣ ಸಂಸತ್ ನ ಉಭಯ ಸದನಗಳ ಕಲಾಪವನ್ನು ಸೋಮವಾರ ದಿನದ ಮಟ್ಟಿಗೆ ಮುಂದೂಡಲಾಯಿತು.

ಭೋಜನಾವಧಿಯ ನಂತರ ಸದನ ಮರು ಸಮಾವೇಶಗೊಳ್ಳುತ್ತಿದ್ದಂತೆ. ಪ್ರತಿಪಕ್ಷಗಳ ಸದಸ್ಯರು ತಮ್ಮ ಆಸನಗಳಿಂದ ಎದ್ದು ನಿಂತು ದೆಹಲಿ ಹಿಂಸಾಚಾರ ವಿಷಯವನ್ನು ಕೂಡಲೇ ಚರ್ಚೆ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿದರು.

ಈ ಗದ್ದಲದ ನಡುವೆಯೇ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ, ನವದೆಹಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ಪೀಠ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ್ ಡೀಮ್ಡ್ ವಿಶ್ವವಿದ್ಯಾಲಯಗಳನ್ನು ಕೇಂದ್ರೀಯ ವಿಶ್ವವಿದ್ಯಾಲಯಗಳನ್ನಾಗಿ ಪರಿವರ್ತಿಸಲು ಅವಕಾಶ ಕಲ್ಪಿಸುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳ ವಿಧೇಯಕ-2019 ಮಂಡಿಸುವಂತೆ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಅವರಿಗೆ ಸೂಚನೆ ನೀಡಿದರು. 

ವಿಧೇಯಕ ಕುರಿತಂತೆ ಸಚಿವರು ಮಾತನಾಡಲು ಆರಂಭಿಸುತ್ತಿದ್ದಂತೆಯೇ, ಪ್ರತಿಪಕ್ಷಗಳ ಸದಸ್ಯರು ಸಭಾಪತಿ ಪೀಠದ ಮುಂದಿನ ಬಾವಿಗೆ ಇಳಿದು ಸಿಎಎ, ಎನ್ ಆರ್ ಸಿ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ ಹಿಂಸಾಚಾರಗಳನ್ನು ತಡೆಯುವಲ್ಲಿ ಸರ್ಕಾರ ವಿಫಲಗೊಂಡಿದೆ ಎಂದು ಸರ್ಕಾರದ ವಿರುದ್ದ ಘೋಷಣೆ ಕೂಗಿದರು. 

ಈ ಗದ್ದಲ, ಕೋಲಾಹಲದ ನಡುವೆಯೇ ಮಾನವ ಸಂಪನ್ಮೂಲ ಸಚಿವರು, ಸಂಸ್ಕೃತ ಜ್ಞಾನ, ವಿಜ್ಞಾನ ಹಾಗೂ ಸಂಶೋಧನಾ ಭಾಷೆಯಾಗಿದೆ ಎಂದು ಹೇಳಿದ್ದು ಕೇಳಿಬಂತು. ಪ್ರಾಚೀನ ಭಾರತೀಯರಿಗೆ ಪ್ಲಾಸ್ಟಿಕ್ ಸರ್ಜರಿ ಹಾಗೂ ಮರಣೋತ್ತರ ಪರೀಕ್ಷೆಗಳಂತ ಜ್ಞಾನ ಹೊಂದಿದ್ದರು ಎಂದರು. ಗದ್ದಲ ಮುಂದುವರಿದ ಕಾರಣ ಸಚಿವರ ಏನು ಹೇಳುತ್ತಿದ್ದಾರೆ ಎಂಬುದು ಕೇಳದಂತಾಯಿತು.

ಸದನದಲ್ಲಿ ಶಾಂತಿ ಕಾಪಾಡುವಂತೆ ಉಪ ಸಭಾಪತಿ ಪದೇ ಪದೇ ಮನವಿ ಮಾಡಿಕೊಂಡರಾದರೂ, ಪ್ರತಿಪಕ್ಷಗಳ ಸದಸ್ಯರು ಸ್ಪಂದಿಸದ ಕಾರಣ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು. ಲೋಕಸಭೆಯಲ್ಲಿ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದೂ ಅಲ್ಲದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ, ಬಾವಿಗಿಳಿದು ಗದ್ದಲ ಉಂಟು ಮಾಡಿದ್ದರ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿಯೂ ಕಲಾಪ ಮುಂದೂಡಲಾಯಿತು.

SCROLL FOR NEXT