ದೇಶ

ಜೈಪುರದಲ್ಲಿ ಇಟಲಿ ಪ್ರವಾಸಿಗನ ಪತ್ನಿಗೂ ಕೊರೋನಾ ವೈರಸ್ ಪಾಸಿಟಿವ್, ದೇಶದಲ್ಲಿ ಪ್ರಕರಣಗಳ ಸಂಖ್ಯೆ 7ಕ್ಕೆ ಏರಿಕೆ

Lingaraj Badiger

ನವದೆಹಲಿ: ಜೈಪುರದಲ್ಲಿ ಇಟಲಿಯ ಪ್ರವಾಸಿಗರೊಬ್ಬರಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿತ್ತು. ಈಗ ಆತನ ಪತ್ನಿಯಲ್ಲೂ ಮಾರಣಾಂತಿಕ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಭಾರತದಲ್ಲಿ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. 

ಕೊರೋನಾ ವೈರಸ್ ನಿಂದ ಬಳಲುತ್ತಿರುವ ಇಟಲಿ ವ್ಯಕ್ತಿಯ ಪತ್ನಿಯನ್ನು ತಪಾಸಣೆಗೆ ಒಳಪಡಿಸಿದಾಗ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದೆ. ಮತ್ತೊಂದು ಪರೀಕ್ಷೆಗಾಗಿ ಆಕೆಯ ರಕ್ತದ ಮಾದರಿಯನ್ನು ಪುಣೆಯ ನ್ಯಾಷಿನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್ಐವಿ)ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಇಟಲಿ ಪ್ರವಾಸಿಗನ ಪತ್ನಿಯಲ್ಲೂ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದೆ. ಮತ್ತೊಮ್ಮೆ ಖಚಿತಪಡಿಸಿಕೊಳ್ಳುವುದಕ್ಕಾಗಿ ಆಕೆಯ ರಕ್ತದ ಮಾದರಿಯನ್ನು ಪುಣೆಯ ಎನ್ ಐವಿ ಗೆ ಕಳುಹಿಸಲಾಗಿದೆ. ಎರಡನೇ ಪರೀಕ್ಷೆಯಲ್ಲೂ ಪಾಸಿಟಿವ್ ಬಂದರೆ ಕೊರೋನಾ ಪ್ರಕರಣಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಟಲಿ ಪ್ರವಾಸಿಗನಿಂದ ಸಂಗ್ರಹಿಸಲಾದ ಮಾದರಿಯನ್ನು ಶನಿವಾರ ಮೊದಲ ಬಾರಿಗೆ ಪರೀಕ್ಷೆ ನಡೆಸಿದಾಗ ನಗೆಟಿವ್ ಕಂಡುಬಂದಿತ್ತು. ಆದರೆ, ಆತನ ಸ್ಥಿತಿ ಕ್ಷೀಣಿಸಿದ್ದರಿಂದ ಸೋಮವಾರ ಮತ್ತೆ ಎರಡನೇ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಂಡುಬಂದಿದೆ.

ಸೋಮವಾರ ದೆಹಲಿ ಹಾಗೂ ಹೈದ್ರಾಬಾದ್ ನಲ್ಲಿ ಎರಡು ಹೊಸ ಪ್ರಕರಣಗಳು ಪತ್ತೆಯಾಗಿತ್ತು. ವಿಶ್ವದಾದ್ಯಂತ ಸುಮಾರು 3, 100 ಜನರ ಸಾವಿಗೆ ಕಾರಣವಾಗಿರುವ ಕೊರೋನಾ ವೈರಸ್ ಸೋಂಕು ಹರಡದಂತೆ  ಸರ್ಕಾರ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ.

SCROLL FOR NEXT