ದೇಶ

''ದ್ವೇಷ ದೆಹಲಿಯನ್ನು ನಾಶಮಾಡಿದೆ'': ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ರಾಹುಲ್

Lingaraj Badiger

ನವದೆಹಲಿ: ರಾಹುಲ್ ಗಾಂಧಿ ನೇತೃತ್ವದ ನಿಯೋಗ 47 ಮಂದಿಯನ್ನು ಬಲಿ ಪಡೆದ ಈಶಾನ್ಯ ದೆಹಲಿಯ ಕೋಮುಗಲಭೆ ಪೀಡಿತ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ, ಹಿಂಸಾಚಾರದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿದರು.

ಗಲಭೆಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಶಾಲೆಯೊಂದಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಈ ಶಾಲೆ ದೆಹಲಿಯ ಭವಿಷ್ಯ. ದ್ವೇಷ ಮತ್ತು ಹಿಂಸಾಚಾರ ಅದನ್ನು ಆ ಭವಿಷ್ಯವನ್ನು ನಾಶ ಮಾಡಿದೆ. ಈ ಹಿಂಸಾಚಾರದಿಂದ ಭಾರತ ಮಾತೆಗೆ ಯಾವುದೇ ಪ್ರಯೋಜನ ಇಲ್ಲ. ಇನ್ನುಮುಂದಾದರೂ ಎಲ್ಲರೂ ಒಟ್ಟಿಗೆ ಕೆಲಸ ಮಾಡಿ, ದೇಶ ಮುನ್ನಡೆಸಬೇಕು ಎಂದು ಹೇಳಿದರು.

ಸಂಸತ್ತಿನಲ್ಲಿ ದೆಹಲಿ ಹಿಂಸಾಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡುವವರೆಗೆ ಸಂಸತ್ತಿನ ಹೊರಗೆ ಮತ್ತು ಒಳಗೆ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ದಂಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿದೆ ಎಂದು ಕಿಡಿಕಾರಿದ ರಾಹುಲ್, ದಂಗೆಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.

ಪಕ್ಷದ ಕಚೇರಿಯಿಂದ ವಾಹನದಲ್ಲಿ ಹೊರಟ ಕಾಂಗ್ರೆಸ್ ನಾಯಕರ ತಂಡ, ಈಆನ್ಯ ದೆಹಲಿಯ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ಥರನ್ನು ಮಾತನಾಡಿಸಿತು. ಈ ವೇಳೆ ಸಂತ್ರಸ್ಥ ಕಟುಂಬಗಳಿಗೆ ಕಾಂಗ್ರೆಸ್ ನಾಯಕರು ಸಾಂತ್ವನ ಹೇಳಿದರು.

ಒಂದು ವಾರದ ಹಿಂದೆ ದೆಹಲಿಯಲ್ಲಿ ನಡೆದ ಕೋಮುಗಲಭೆಯಲ್ಲಿ ಕನಿಷ್ಠ 47 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ.

SCROLL FOR NEXT