ದೇಶ

ಕೊರೊನಾ ವೈರಸ್: ಕ್ಷಿಪ್ರ ಪ್ರಕ್ರಿಯೆ ತಂಡ ರಚನೆಗೆ ರಾಜ್ಯಗಳಿಗೆ ಕೇಂದ್ರ ಸೂಚನೆ, ಭಾರತೀಯರ ಸ್ಥಳಾಂತರಕ್ಕೆ ಪ್ರಯತ್ನ 

Sumana Upadhyaya

ನವದೆಹಲಿ: ಕೊರೊನಾ ವೈರಸ್ ಸೋಂಕು ಭಾರತಕ್ಕೂ ಕಾಲಿಟ್ಟು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಸಮುದಾಯಗಳಲ್ಲಿ ಸೋಂಕು ಪ್ರಸಾರವಾಗುತ್ತಿರುವುದನ್ನು ಮನಗಂಡು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ ಮಟ್ಟಗಳಲ್ಲಿ ಕ್ಷಿಪ್ರ ಪ್ರಕ್ರಿಯೆ ತಂಡಗಳನ್ನು ರಚಿಸುವಂತೆ ಸೂಚಿಸಿದೆ.

ಸದ್ಯಕ್ಕೆ 16 ಇಟಲಿ ಮೂಲದ ಪ್ರವಾಸಿಗರು ಸೇರಿದಂತೆ 29 ಮಂದಿಯಲ್ಲಿ ಕೊರಾನಾ ವೈರಸ್ ಸೋಂಕು ಭಾರತದಲ್ಲಿ ಪತ್ತೆಯಾಗಿದೆ.ಕಳೆದ ತಿಂಗಳು ಕೇರಳದಲ್ಲಿ ಮೂವರಲ್ಲಿ ಪತ್ತೆಯಾಗಿದ್ದ ಕೊರೊನಾ ವೈರಸ್ ಸೋಂಕು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.


ಕೊರೊನಾ ವೈರಸ್ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಇಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿ, ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡುವ ಮೊದಲೇ ಭಾರತ ಈ ಸೋಂಕಿನಿಂದ ತಡೆಗಟ್ಟುವ ಹಲವು ಕ್ರಮಗಳನ್ನು ಕೈಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ ಕೊವಿಡ್-19ನ್ನು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡದಿದ್ದರೂ ಕೂಡ ಅದನ್ನು ಎದುರಿಸಲು ಮತ್ತು ತಡೆಗಟ್ಟಲು ದೇಶಗಳು ಸರ್ವ ರೀತಿಯಲ್ಲಿ ಸನ್ನದ್ಧವಾಗಬೇಕು ಎಂದು ಸೂಚಿಸಿತ್ತು. ಈ ನಿಟ್ಟಿನಲ್ಲಿ ಭಾರತ ತಳಮಟ್ಟದಿಂದ ತಯಾರಿ ನಡೆಸಿದ್ದು ಜನವರಿ 17ರಿಂದಲೇ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವ ಹರ್ಷವರ್ಧನ್ ಹೇಳಿದರು.


ನಿನ್ನೆಯವರೆಗೆ ಅಂದರೆ ಮಾರ್ಚ್ 4ರವರೆಗೆ ಭಾರತದಲ್ಲಿ 29 ಕೊರೊನಾ ವೈರಸ್ ಕೇಸುಗಳು ಪತ್ತೆಯಾಗಿವೆ. ಇದಕ್ಕೆ ಸಚಿವರ ತಂಡವೊಂದು ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದೆ. ನಾನು ಪ್ರತಿದಿನ ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದೇನೆ. ಸಚಿವರ ಗುಂಪು ಕೂಡ ಪರಿಸ್ಥಿತಿಯ ನಿಗಾ ವಹಿಸುತ್ತಿದೆ ಎಂದರು.


ವಿದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲಾಗುತ್ತಿದ್ದು ಸಮುದಾಯ ಕಣ್ಗಾವಲಿನಡಿಯಲ್ಲಿ ನಿನ್ನೆಯವರೆಗೆ 28 ಸಾವಿರದ 529 ಮಂದಿಯನ್ನು ಕರೆತಂದು ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರಗಳು ಹೆಚ್ಚುವರಿ ಸಿಬ್ಬಂದಿಯನ್ನು ನೀಡಿ ಸಹಕರಿಸಿದೆ ಎಂದು ತಿಳಿಸಿದರು.


ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಪ್ರಕಟಣೆ ಏನು ಹೇಳುತ್ತದೆ: ಕೊವಿಡ್-19 ಎಂದು ಕರೆಯಲ್ಪಡುವ ಕೊರೊನಾ ವೈರಸ್ ವಿದೇಶಗಳಿಂದ ಬಂದ ಪ್ರಯಾಣಿಕರಿಂದ ಮಾತ್ರ ಹಬ್ಬುವುದಲ್ಲದೆ ಸಮುದಾಯಗಳಲ್ಲಿ ಕೂಡ ಕ್ಷಿಪ್ರವಾಗಿ ಪ್ರಸರಣವಾಗುತ್ತಿರುವುದರಿಂದ ರಾಜ್ಯಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಕ್ಷಿಪ್ರ ಪ್ರಕ್ರಿಯೆ ತಂಡಗಳನ್ನು ಜಿಲ್ಲೆಗಳಲ್ಲಿ, ಬ್ಲಾಕ್ ಮತ್ತು ಗ್ರಾಮೀಣ ಮಟ್ಟಗಳಲ್ಲಿ ರಚಿಸುವಂತೆ ಕೇಳಲಾಗಿದೆ.


ಭಾರತದಲ್ಲಿ ಇದುವರೆಗೆ 3 ಸಾವಿರದ 542 ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಅವರಲ್ಲಿ 29 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 92 ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷಿಸುವ ಕಾರ್ಯ ನಡೆಯುತ್ತಿದ್ದು 23 ಜನರ ರಕ್ತದ ಮಾದರಿಗಳನ್ನು ಮರು ದೃಢೀಕರಿಸಲಾಗುತ್ತಿದೆ ಎಂದು ಹೇಳಿದೆ. ಖಾಸಗಿ ವಲಯಗಳು ಕೂಡ ಈ ಪ್ರಕ್ರಿಯೆಯಲ್ಲಿ ಸೇರಿವೆ.
ಇಂದು ಸಂಜೆ ಕೊರೊನಾ ವೈರಸ್ ಸಂಬಂಧ ಕೇಂದ್ರ ಸಚಿವ ಡಾ ಹರ್ಷವರ್ಧನ್ ಇದಕ್ಕೆ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಲಿದ್ದಾರೆ. 


ಕೊರೊನಾ ಕಾಣಿಸಿಕೊಂಡ 14 ಮಂದಿ ಇಟಲಿ ಪ್ರಜೆಗಳನ್ನು ಗುರುಂಗಾವ್ ನ ಮೆದಾಂತ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ವರ್ಗಾಯಿಸಲಾಗಿದೆ. ವಿದೇಶಾಂಗ ಸಚಿವಾಲಯ ಇರಾನ್ ಜೊತೆ ಸಂಪರ್ಕದಲ್ಲಿದ್ದು ಭಾರತೀಯ ಯಾತ್ರಿಕರನ್ನು ಸ್ಥಳಾಂತರಿಸಲು ಸಾಧ್ಯವಿರುವ ಬಗ್ಗೆ ಮತ್ತು ಕೊರೊನಾ ಪೀಡಿತ ದೇಶದಿಂದ ವಿದ್ಯಾರ್ಥಿಗಳನ್ನು ಕರೆತರುವ ಬಗ್ಗೆ ಪ್ರಯತ್ನಗಳನ್ನು ನಡೆಸಲಾಗುತ್ತದೆ ಎಂದರು.

SCROLL FOR NEXT