ದೇಶ

ಹೆಚ್ಚೆಚ್ಚು ವಿದ್ಯಾರ್ಥಿಗಳು ಒಗ್ಗೂಡದಂತೆ ನೋಡಿಕೊಳ್ಳಿ: ಶಾಲೆಗಳಿಗೆ ಸಲಹೆ ನೀಡಿದ ಆರೋಗ್ಯ ಸಚಿವಾಲಯ

Manjula VN

ನವದೆಹಲಿ: ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಹೆಜ್ಜೆ ಇಟ್ಟಿದ್ದು, 29 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಒಗ್ಗೂಡದಂತೆ ನೋಡಿಕೊಳ್ಳುವಂತೆ ದೇಶದಲ್ಲಿರುವ ಎಲ್ಲಾ ಶಾಲೆಗಳಿಗೂ ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ. 

ಕೊರೋನಾ ಪೀಡಿತ ದೇಶದಿಂದ ಶಾಲೆಯ ಯಾವುದೇ ವಿದ್ಯಾರ್ಥಿಗಳು ಅಥವಾ ಸಿಬ್ಬಂದಿ ಬಂದರೂ ಅಥವಾ ಕೊರೋನಾ ಪೀಡಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿ ಇದ್ದರೆ ಕೂಡಲೇ ಮಾಹಿತಿ ನೀಡಬೇಕು. ಆಯಾ ತರಗತಿಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದ್ದು, ಯಾವುದೇ ವಿದ್ಯಾರ್ಥಿಗಳಲ್ಲಿ ಸೋಂಕು ತಗುಲಿರುವ ಅನುಮಾನ ಬಂದ ಕೂಡಲೇ ಪೋಷಕರಿಗೆ ಮಾಹಿತಿ ನೀಡಬೇಕು. ವೈದ್ಯರ ಸಲಹೆ ಪಡೆದುಕೊಂಡು ನಂತರ ಶಾಲೆಗೆ ಕಳುಹಿಸುವಂತೆ ತಿಳಿಸಿ ಎಂದು ತಿಳಿಸಿದೆ. 

ಅಲ್ಲದೆ, ಶಾಲೆಗಳಲ್ಲಿ ಆಲ್ಕೋಹಾಲ್ ನಿಂದ ತಯಾರಿಸಲಾಗಿರುವ ಸ್ಯಾನಿಟೈಸರ್ ಗಳನ್ನು ಬಳಕೆ ಮಾಡುವಂತೆ ಹಾಗೂ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿಯೇ ಉಳಿಯುವಂತೆಯೂ ಸಲಹೆ ನೀಡಿದೆ. 

ಎಲ್ಲಾ ಶೌಚಾಲಯಗಳಲ್ಲಿ ಹೆಚ್ಚೆಚ್ಚು ಸೋಪು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸುವಂತೆ, ಸ್ವಚ್ಛತೆ ಕಾಪಾಡುವಂತೆ ಶಾಲೆಗಳಿಗೆ ತಿಳಿಸಿವೆ. 

ಕೆಮ್ಮು ಹಾಗೂ ಸೀನುವ ಜನರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತೀಯೊಬ್ಬರು ಟಿಶ್ಯೂ ಹಾಗೂ ಕರವಸ್ತ್ರಗಳನ್ನು ಬಳಕೆ ಮಾಡಬೇಕು. ಯಾವುದೇ ವಸ್ತು ಮುಟ್ಟಿದರೂ ಕೂಡ ಕಣ್ಣು, ಮೂಗು ಹಾಗೂ ಬಾಯಿಯನ್ನು ಮುಟ್ಟಿಕೊಳ್ಳದಿರಿ. ಪ್ರತೀ ಬಾರಿ ಬಳಸಿದ ಟಿಶ್ಯೂವನ್ನು ಬಿಸಾಡಿ. ಕೆಮ್ಮು ಹಾಗೂ ಸೀನಿದ ಕೂಡಲೇ ಕೈಗಳನ್ನು ತೊಳೆದುಕೊಳ್ಳಿ ಎಂದು ತಿಳಿಸಿದೆ. 

SCROLL FOR NEXT