ದೇಶ

ತಮಿಳುನಾಡಿನಲ್ಲಿ ವ್ಯಕ್ತಿಯೋರ್ವನಿಗೆ ಕರೋನಾ 'ಪಾಸಿಟಿವ್', ಭಾರತದಲ್ಲಿ 34ನೇ ಪ್ರಕರಣ ಪತ್ತೆ!

Vishwanath S

ನವದೆಹಲಿ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ನಿಧಾನವಾಗಿ ಭಾರತದಲ್ಲಿಯೂ ತನ್ನ ಕಬಂಧಬಾಹು ಚಾಚುತ್ತಿದ್ದು, ತಮಿಳುನಾಡಿನ ವ್ಯಕ್ತಿಯೋರ್ವನಲ್ಲಿ ಕರೋನಾ ವೈರಸ್ ಪತ್ತೆಯಾಗಿದ್ದು ಭಾರತದಲ್ಲಿ 34ನೇ ಪ್ರಕರಣ ಇದಾಗಿದೆ.

ಕೊಲ್ಲಿ ರಾಷ್ಟ್ರ ಒಮನ್ ನಿಂದ ಸ್ವದೇಶಕ್ಕೆ ವಾಪಸ್ಸಾಗಿದ್ದ ವ್ಯಕ್ತಿಯಲ್ಲಿ ಕರೋನಾ ಇರುವುದು ಪತ್ತೆಯಾಗಿದೆ. ಸದ್ಯ ಆತನನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದವಾರ ಇಟಲಿಯಿಂದ ಭಾರತಕ್ಕೆ ವಾಪಸ್ ಆಗಿದ್ದ ಪಂಜಾಬ್ ಮೂಲದ ಇಬ್ಬರು ವ್ಯಕ್ತಿಗಳಲ್ಲಿ ಕೊರೋನಾ ಸೋಂಕು ಇರಬಹುದು ಎಂದು ಶಂಕೆ ವ್ಯಕ್ತವಾಗಿದ್ದು, ಇಬ್ಬರನ್ನೂ ಅಮೃತಸರದಲ್ಲಿರುವ ಗುರುನಾನಕ್ ದೇವ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತಂತೆ ಮಾತನಾಡಿರುವ ಗುರುನಾನಕ್ ದೇವ್ ಆಸ್ಪತ್ರೆಯ ವೈದ್ಯ ರಮಣ್ ಶರ್ಮಾ, ಕೊರೋನಾ ಸೋಂಕು ಶಂಕಿತ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಇವರ ರಕ್ತದ ಮಾದರಿಯನ್ನು ಪರೀಕ್ಷೆ ರವಾನಿಸಲಾಗಿದೆ. ಪ್ರಸ್ತುತ ಇಬ್ಬರನ್ನೂ ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಸಂಪರ್ಕಕ್ಕೆ ಯಾರೂ ಬಾರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಇದೇ ರೀತಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಒಬ್ಬರಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿದ್ದು, ಈ ಕುರಿತು ಜಮ್ಮು ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಷ್ಮಾ ಚೌಹ್ವಾಣ್ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಜಮ್ಮುವಿನಲ್ಲಿರುವ ಸರ್ಕಾರ ವೈದ್ಯಕೀಯ ಕಾಲೇಜಿನಲ್ಲಿ ತೆರೆಯಲಾಗಿರುವ ಪ್ರತ್ಯೇಕ ಕೊರೋನಾ ಚಿಕಿತ್ಸಾ ವಿಭಾಗದಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗ್ಗೆಯಷ್ಟೇ ಕೊರೊನಾ ಸೋಂಕಿನ ಬಗ್ಗೆ ದೇಶದ ಜನರು ಹೆಚ್ಚು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದರು. ಭಾರತೀಯ ಜನಔಷಧಿ ಪರಿ ಯೋಜನಾ ಫಲಾನುಭವಿಗಳೊಂದಿಗೆ ವಿಡಿಯೊ ಕಾನ್ಪರೆನ್ಸ್‌ ಮೂಲಕ ಸಂವಾದ ನಡೆಸಿದ ಅವರು, ಇದು ಕೇವಲ ರಾಷ್ಟ್ರೀಯ ಜನಔಷಧಿ ದಿವಸ ಅಲ್ಲ. ಇದು ಲಕ್ಷಾಂತರ ಭಾರತೀಯರನ್ನು ಒಂದುಗೂಡಿಸುವ ವಿಶೇಷ ಸಂದರ್ಭವಾಗಿದೆ. ಲಕ್ಷಾಂತರ ಜನರು ಈ ಯೋಜನೆಯಿಂದ ಅನುಕೂಲ ಪಡೆದಿದ್ದಾರೆ’ ಎಂದು ತಿಳಿಸಿದರು. ಅಂತೆಯೇ ಹಸ್ತಲಾಘವ ಕಡಿಮೆಗೊಳಿಸಿ ನಮಸ್ತೆಯ ಮೂಲಕ ಶುಭಕೋರಿ ಎಂದು ಅವರು ಹೇಳಿದರು.

SCROLL FOR NEXT